ತುಮಕೂರು: ಭೂಮಿ ಮತ್ತು ವಸತಿ ಹೋರಾಟ ಸಮಿತಿ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರು ಜಿಲ್ಲಾ ಘಟಕ ಹಂದ್ರಾಳ್ ನಾಗಭೂಷಣ್ ಅವರ ನೇತೃತ್ವದಲ್ಲಿ ಭೂಮಿ ವಸತಿಗಾಗಿ ಅಹೋರಾತ್ರಿ ಧರಣಿಯನ್ನು ಮಾರ್ಚ್ 21 ರಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಧರಣಿ ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೇಟಿಯಾಗಿ ನನೆಗುದಿಗೆ ಬಿದ್ದಿರುವ ಭೂಮಿ ಮತ್ತು ವಸತಿ ಕಡತಗಳ ಪರಿಶೀಲನೆ ನಡೆಸಿ ಆಡಳಿತಾತ್ಮಕವಾಗಿ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಜಿಲ್ಲಾಡಳಿತವು ಮಾಡಿ ಕೊಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿ ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಮುಖಂಡರಾದ ಹಂದ್ರಾಳ್ ನಾಗಭೂಷಣ್ ಅವರು, ಈ ಹಿಂದೆ ಜಿಲ್ಲಾಧಿಕಾರಿಗಳು ನೀಡಿರುವ ಭೂಮಿಗೆ ಹಕ್ಕು ಪತ್ರ ನೀಡಲು ಆದೇಶದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ, ಈ ಹಿಂದಿನ ಬ್ಯಾಲ್ಯ ಗ್ರಾಮ ಪಂಚಾಯ್ತಿಯ ಪಿಡಿಓ ಸಂತೋಷ್ ಸಿಂಗ್, ಹಾಲಿ ಪಿಡಿಓ ಮುದ್ದುರಾಜ್ ರವರನ್ನು ಕೂಡಲೇ ಅಮಾನತು ಗೊಳಿಸಬೇಕು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹಣ ದುರುಪಯೋಗಪಡಿಸಿಕೊಂಡಿರುವ, ಸರ್ಕಾರಕ್ಕೆ ಮೋಸ ವಂಚನೆ ಮಾಡಿರುವ ಇದೇ ಬ್ಯಾಲ್ಯ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ನಾಗರಾಜು, ಲಕ್ಷ್ಮೀನಾರಾಯಣಪ್ಪ ಇವರನ್ನು ಸೇವೆಯಿಂದ ವಜಾ ಮಾಡಬೇಕು. ಅಟ್ರಾಸಿಟಿ ಆರೋಪ ಹೊತ್ತಿರುವ ಚಿ.ನಾ.ಹಳ್ಳಿ ತಹಸೀಲ್ದಾರ್ ಅವರನ್ನು ಅಮಾನತು ಗೊಳಿಸಬೇಕು. ಹೆಬ್ಬೂರು ಪೊಲೀಸ್ ಠಾಣಾ ಜಾಗವನ್ನು ಪೊಲೀಸ್ ಇಲಾಖೆಗೆ ಇ-ಸ್ವತ್ತು ಮಾಡಿಸಿ ಕೊಡುವವರೆಗೂ ಮತ್ತು ಇತರೆ ಆಡಳಿತಾತ್ಮಕ ಬೇಡಿಕೆಗಳನ್ನು ಸ್ಥಳದಲ್ಲೇ ಬಗೆ ಹರಿಸುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ತಿಳಿಸಿದರು.
ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಕೂಡ ಇಂದಿಗೂ ದೀನ ದುರ್ಬಲರು ತಮ್ಮ ಮೂಲಭೂತ ಹಕ್ಕಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸುತ್ತಿರುವುದು ಆಡಳಿತದ ವೈಫಲ್ಯಕ್ಕೆ ಕಾರಣವಾಗಿದೆ. ಇಂತಹ ಧರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರದೃಷ್ಟಕರ ಎಂದು ಹೇಳಿದರು.
ಹಂದ್ರಾಳ್ ನಾಗಭೂಷಣ್ ಮಾತನಾಡಿ, ಸ್ಥಳದಲ್ಲೇ ಸಮಸ್ಯೆಗಳು ಬಗೆಹರಿಯುವವರೆಗೂ ನಿರಂತರ ಆಹೋರಾತ್ರಿ ಧರಣಿಯನ್ನು ಮುಂದುವರಿಸುತ್ತೇವೆ. ಧರಣಿ ನಿರತರ ಆರೋಗ್ಯದ ಮೇಲೆ ದುಷ್ಪರಿಣಾಮವಾದಲ್ಲಿ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧರಣಿಯಲ್ಲಿ ಮಾಜಿ ಶಾಸಕರಾದ ಬಸವರಾಜ್, ಆಮ್ ಆದ್ಮಿ ಪಕ್ಷದ ಮುಖಂಡರಾದ ಡಾ:ವಿಶ್ವನಾಥ್, ಪ್ರಭುಸ್ವಾಮಿ, ಮಾರುತಿ,ನಾಗೇಶ್, ಸಮಿತಿಯ ರಾಜ್ಯ ಸಂಚಾಲಕ ಕುಮಾರ್ ಸಮತಳ, ಭದ್ರೇ ಗೌಡ, ಮಂಜುನಾಥ್, ಯತಿರಾಜ್, ಕುಮಾರಿ ಗಂಗಾರಾಣಿ ಹಾಗೂ ನೊಂದ ಫಲಾನುಭವಿಗಳು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5