ಬೀದರ್: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳಿಂದಾಗಿ ಕಟಾವಿನ ಹಂತಕ್ಕೆ ಬಂದಿದ್ದ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದ್ದು, ಸಾಲ–ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಹಾಗೂ ಶಾರ್ಟ್ ಸರ್ಕ್ಯೂಟ್ ಅವಘಡಗಳಿಂದಾಗಿ ಸಾಲು ಸಾಲು ಅಗ್ನಿ ದುರಂತಗಳು ಸಂಭವಿಸುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಭಾಲ್ಕಿ ತಾಲೂಕಿನ ಭಾತಂಬ್ರಾ ಮತ್ತು ಜೋಳದಾಪಕಾ ಗ್ರಾಮಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಭಾತಂಬ್ರಾ ಗ್ರಾಮದ ರೈತ ಮಹೇಶ ರಾಚೋಟೆ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯ ಅಭಾವದ ನಡುವೆಯೂ ಕಷ್ಟಪಟ್ಟು ಉತ್ತಮವಾಗಿ ಬೆಳೆಸಿದ್ದ ಕಬ್ಬು ಕಟಾವಿನ ಹಂತಕ್ಕೆ ತಲುಪಿತ್ತು. ಆದರೆ, ಭಾನುವಾರ ಕಬ್ಬಿನ ಹೊಲದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗಳು ಪರಸ್ಪರ ಘರ್ಷಣೆಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬೆಳೆ ಬೂದಿಯಾಗಿದೆ.
ಇದೇ ರೀತಿ ಜೋಳದಾಪಕಾ ಗ್ರಾಮದ ರೈತ ಬಸವರಾಜ ಶಿವರಾಜ ಪಾಟೀಲ್ ಅವರಿಗೆ ಸೇರಿದ ಸುಮಾರು ಎರಡೂವರೆ ಎಕರೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿಯೇ ಎರಡು ಎಕರೆಗೂ ಅಧಿಕ ಪ್ರದೇಶದಲ್ಲಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ.
ಮತ್ತೊಂದೆಡೆ, ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿಯೂ ಇಂತಹದೇ ಘಟನೆ ಸಂಭವಿಸಿದೆ. ಹಾಲಹಳ್ಳಿ ಗ್ರಾಮದ ರೈತ ಬಾಪುರಾವ ಪಾಟೀಲ್ ಎಂಬುವವರು ಒಂದೇ ಕಡೆ ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನಲ್ಲಿ ಸುಮಾರು ಮೂರು ಎಕರೆ ಬೆಳೆ ಸೋಮವಾರ ಮಧ್ಯಾಹ್ನ ಐಪಿ ಸೆಟ್ ಟಿಸಿಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಸ್ಮವಾಗಿದೆ. ಇದರಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣೆದುರಲ್ಲೇ ನಶಿಸಿ ಹೋಗಿರುವುದರಿಂದ ರೈತರು ತೀವ್ರ ಆಕ್ರೋಶ ಮತ್ತು ಸಂಕಷ್ಟ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಕಂದಾಯ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ನಷ್ಟದ ಮೌಲ್ಯಮಾಪನ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
