ಬಿಗ್ ಬಾಸ್ ತೊರೆಯುವುದಾಗಿ ನಟ ಕಿಚ್ಚ ಸುದೀಪ್ ನಿನ್ನೆ ಟ್ವೀಟ್ ಮಾಡಿದ್ದರು. ಇದು ನನ್ನ ಕೊನೆಯ ಬಿಗ್ ಬಾಸ್ ಶೋ ಎಂದೂ ಹೇಳಿದ್ದರು. ಈ ನಡುವೆ ಕನ್ನಡಪರ ಹೋರಾಟಗಾರರು ಸುದೀಪ್ ಗೆ ಅವಮಾನಿಸಲಾಗಿದೆ ಎಂದು ಬಿಗ್ ಬಾಸ್ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಿಚ್ಚ ಸುದೀಪ್ ಅವರ ಅಸಮಾಧಾನವನ್ನು ಸರಿಪಡಿಸಲು ಆಯೋಜಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್, ಬಿಗ್ಬಾಸ್ ಸೀಸನ್ 11ರ ಮೇಲೆ ನೀವು ತೋರಿದ ಸ್ಪಂದನೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ನೀವು ತೋರಿದ ಪ್ರೀತಿ ಮತ್ತು ಗೌರವ ಎಂಥದ್ದು ಎಂಬುದನ್ನು ಟಿಆರ್ಪಿ ನಂಬರ್ ಹೇಳುತ್ತಿದೆ. ಸುಮಾರು 11 ವರ್ಷಗಳ ಕಾಲ ಒಟ್ಟಿಗೆ ನಡೆದಿದ್ದೇನೆ. ಇನ್ನು ಮುಂದೆ ನಾನು ಮಾಡಬೇಕಾಗಿರುವುದನ್ನು ಮಾಡುವ ಸಮಯ ಬಂದಿದೆ. ಬಿಗ್ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ಮತ್ತು ಈ ಎಲ್ಲಾ ವರ್ಷಗಳಿಂದ ಬಿಗ್ಬಾಸ್ ಶೋ ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಸಾಧ್ಯವಾದಷ್ಟು ನಿಮ್ಮೆಲ್ಲರನ್ನು ರಂಜಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಪ್ಪುಗೆ ಸದಾ ಹೀಗೆ ಇರಲಿ ಎಂದು ಕಿಚ್ಚ ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿ ಬಿಗ್ ಬಾಸ್ ಶೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಗ್ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೇ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ಬಿಗ್ಬಾಸ್ ನಿರೂಪಣೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್ಬಾಸ್ ಬಿಡಿ ಇಲ್ಲ ಬಿಗ್ಬಾಸ್ ನಿಲ್ಲಿಸಬೇಕಾಗುತ್ತದೆ. ಅಸಲಿ ವಿಷಯವನ್ನು ನಾಳೆ ಮಾತಾಡ್ತೀನಿ ಎಂದು ರೂಪೇಶ್ ರಾಜಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ರೂಪೇಶ್ ರಾಜಣ್ಣ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್ಬಾಸ್ ಆಯೋಜಕರು ಒಪ್ಪಿದ್ದಾರೆ. ಅವರಿಗೆ ಧನ್ಯವಾದಗಳು. ಕನ್ನಡದ ಪರವಾಗಿ ನಿಂತ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ. ಜೈ ಕರ್ನಾಟಕ ಎಂದು ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಆಕ್ರೋಶಕ್ಕೆ ಮಣಿದು ಆಯೋಜಕರು ತಪ್ಪು ಸರಿ ಮಾಡಿಕೊಳ್ಳಲು ಒಪ್ಪಿದಂತೆ ಕಾಣುತ್ತಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296