ಕೊರಟಗೆರೆ: ತಾಲ್ಲೂಕಿನ ಕಸಬ ಹೋಬಳಿಯ ಬೋಡ ಬಂಡೇನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ತಾಯಿ ದೇವಸ್ಥಾನಕ್ಕೆ ಮಾಜಿ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಆರಾಧ್ಯ ದೈವವಾಗಿರುವ ಶ್ರೀ ಚೌಡೇಶ್ವರಿ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದಾರೆ. ಪ್ರಸ್ತುತ ದೇವಸ್ಥಾನದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಆರ್ಥಿಕ ಕೊರತೆಯಿಂದ ಕಾಮಗಾರಿ ಮುಂದುವರಿಸಲು ದಾನಿಗಳ ಸಹಕಾರ ಅಗತ್ಯವಾಗಿದೆ ಎಂದು ಗ್ರಾಮಸ್ಥರು ಹಾಗೂ ಮುಖಂಡರು ಅನಿಲ್ ಕುಮಾರ್ ಅವರ ಗಮನಕ್ಕೆ ತಂದರು.
ದೇವಸ್ಥಾನದ ಕಾಮಗಾರಿ ಹಾಗೂ ಪ್ರಗತಿಯನ್ನು ವೀಕ್ಷಿಸಿದ ಅನಿಲ್ ಕುಮಾರ್ ಅವರು, ಗ್ರಾಮದ ಜನರ ಭಕ್ತಿ ಹಾಗೂ ಶ್ರಮವನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ಅವರು, “ಇತಿಹಾಸ ಪ್ರಸಿದ್ಧ ಈ ದೇವಸ್ಥಾನವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಪುನರ್ ನಿರ್ಮಾಣ ಕಾರ್ಯಕ್ಕೆ ನನ್ನಿಂದ ಸಾಧ್ಯವಾದ ಸಹಾಯವನ್ನು ಶೀಘ್ರದಲ್ಲೇ ತಲುಪಿಸುತ್ತೇನೆ. ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿಯ ಸದಸ್ಯರು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


