ತುಮಕೂರು: ಕರ್ನಾಟಕ ರಾಜ್ಯ ಗೃಹ ಸಚಿವರ ತವರು ಜಿಲ್ಲೆ ಹಾಗೂ ಸಹಕಾರ ಸಚಿವ ರಾಜಣ್ಣನವರ ಕ್ಷೇತ್ರಗಳಲ್ಲಿ ಇರುವ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಮತ್ತು ಇತರೆ ವೈದ್ಯಕೀಯ ಸೇವೆಗೆ ದೀನ ದುರ್ಬಲರು ಬಡವರು ಲಂಚ ನೀಡದೆ ಇದ್ದರೆ ಸೇವೆಯೇ ಇಲ್ಲ ಎಂಬಂತಾಗಿದೆ.
ಗುರುವಾರ ಬೆಂಗಳೂರಿನ ಆರೋಗ್ಯ ಸೌಧದಿಂದ ಮಧುಗಿರಿ ತಾಲೂಕ್ ಮತ್ತು ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳ ಪಡುವ ಪುರವರ ಹೋಬಳಿ ಬ್ಯಾಲ್ಯ ಆಸ್ಪತ್ರೆಗಳಿಗೆ ಮುಖ್ಯ ಜಾಗೃತಾ ಅಧಿಕಾರಿ ಕುಪ್ಪೆ ಶ್ರೀನಿವಾಸ್ ಅವರು ಭೇಟಿ ನೀಡುವ ಮುನ್ಸೂಚನೆ ತಿಳಿದ ತುಮಕೂರು ಘಟಕದ ನೈಜ ಹೋರಾಟಗಾರರ ವೇದಿಕೆಯ ಸದಸ್ಯರಾದ ಹಂದ್ರಾಳ್ ನಾಗಭೂಷಣ್, ಮಧುಗಿರಿ ಮಹೇಶ್, ಸತೀಶ್ ಟಿ.ಪಿ. ಅರಳಾಪುರ ರಮೇಶ್, ಅವರು ಮಧುಗಿರಿ ಮತ್ತು ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ವ್ಯಾಪ್ತಿಯ ಬ್ಯಾಲ್ಯ ಆಸ್ಪತ್ರೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮುಖ್ಯ ಜಾಗೃತ ದಳದ ಅಧಿಕಾರಿಗೆ ಲಂಚದ ಹಣ ಸಮೇತ ವಾಸ್ತವ ಸ್ಥಿತಿಗಳನ್ನು ಕಣ್ಣೆದುರೇ ಬಿಚ್ಚಿಟ್ಟರು.
ಬ್ಯಾಲ್ಯ ಪ್ರಾಥಮಿಕ ಆಸ್ಪತ್ರೆಯ ವ್ಯಾಪ್ತಿಯ ವಡ್ಡರಹಟ್ಟಿ ಕಾವೇರಿ ಎಂಬ ಮಹಿಳೆ ಕಡೆಯಿಂದ ಹೆರಿಗೆ ಮಾಡಿಸಲು ನರ್ಸ್ ಅನುಸೂಯಮ್ಮ ಪಡೆದಿದ್ದ 5,000 ಗಳನ್ನು ನರ್ಸ್ ನಿಂದ ಹಣವನ್ನು ಸಂಬಂಧಿಕರಿಗೆ ವಾಪಸ್ ಕೊಡಿಸಿರುತ್ತಾರೆ. ಹಾಗೆಯೇ ನಿಹಾರಿಕಾಯಿಂದ ಪಡೆದ ಲಂಚದ ಹಣ 1,300 ರೂಪಾಯಿಗಳನ್ನು ಮತ್ತು ದೊಡ್ಡೇರಿ ಹೋಬಳಿಯ ವೃದ್ಧೆ ಕಡೆಯ ರಂಗನಾಥ್ ಕಡೆಯಿಂದ ಪಡೆದ ಲಂಚದ ಹಣ 3,800 ರೂಪಾಯಿಗಳನ್ನು ಆಡಳಿತ ವೈದ್ಯಾಧಿಕಾರಿಯಾದ ಗಂಗಾಧರ್ ಅವರಿಂದ ( AMO) ವಾಪಸ್ ಕೊಡಿಸಿರುತ್ತಾರೆ. ಈ ಬಗ್ಗೆ ಹಂದ್ರಾಳ್ ನಾಗಭೂಷಣ್ ರವರು ಅವರು ಈ ದಿನ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದು ತುಮಕೂರಿನ ಜಿಲ್ಲಾಡಳಿತದ ವೈಫಲ್ಯದಿಂದ ತಾಲೂಕಿನ ಆಸ್ಪತ್ರೆಗಳಲ್ಲಿ ಬಡವರು ಮತ್ತು ದೀನ ದುರ್ಬಲರಿಂದ ಲಂಚ ವಸೂಲಿಯಾಗುತ್ತಿದ್ದು, ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಲಂಚಾವತಾರ ನಡೆಯುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್. ಎಂ.ವೆಂಕಟೇಶ ಅಭಿಪ್ರಾಯಪಟ್ಟಿದ್ದಾರೆ.
ನೈಜ ಹೋರಾಟಗಾರರ ವೇದಿಕೆಯು ಭ್ರಷ್ಟಾಚಾರದ ವಿರುದ್ಧ ಮತ್ತು ಜನಪರ ಕೆಲಸಗಳ ಪರ ನಿರಂತರವಾಗಿ ಹೋರಾಟ ಮಾಡುತ್ತಿದ್ದು. ತುಮಕೂರು ಘಟಕದ ವೇದಿಕೆಯ ಸದಸ್ಯರಿಗೆ ರಾಜ್ಯ ವೇದಿಕೆಯ ಹೆಚ್.ಎಂ.ವೆಂಕಟೇಶ್ ಹಿರಿಯ ಸಾಮಾಜಿಕ ಹೋರಾಟಗಾರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.