ಲೋಕಸಭಾ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷ(ಬಿ.ಎಸ್.ಪಿ.) ಅಭ್ಯರ್ಥಿ ಚಿನ್ನಪ್ಪ ವೈ. ಚಿಕ್ಕಹಾಗಡೆ ನಾಮಪತ್ರ ವಾಪಸ್ ಪಡೆದುಕೊಂಡಿದ್ದು, ಡಿ.ಕೆ. ಸಹೋದರರ ದಬ್ಬಾಳಿಕೆ ಮತ್ತು ಧಮ್ಕಿಗೆ ಹೆದರಿ ನಾಮಪತ್ರ ವಾಪಸ್ ಪಡೆಯಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದಾರೆ.
ಕರ್ನಾಟಕದ ಪ್ರಮುಖ ಹೈವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಈ ಸಾರಿ ಪ್ರಮುಖ ಆಕರ್ಷಣೀಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದ ಏಕೈಕ ಕ್ಷೇತ್ರ ಇದು. ಅದರಲ್ಲೂ ನಾಡಿನ ಪ್ರಬಲ ನಾಯಕರಾದ ಡಿಕೆ ಬ್ರದರ್ಸ್ ಕಣ್ಣಿಟ್ಟ, ಅವರ ಕಪಿಮುಷ್ಟಿಯಲ್ಲಿ ಇರುವ ಏಕೈಕ ಕ್ಷೇತ್ರ. ಹೀಗಾಗಿ ಪ್ರತಿಷ್ಠೆಯ ಅಖಾಡವೂ ಇದಾಗಿದೆ. ಆದರೆ ಈ ಸಲ ಬಿಜೆಪಿ ಡಿ.ಕೆ. ಸುರೇಶ್ ಅವರಷ್ಟೇ ಪ್ರಬಲವಾಗಿರುವ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು, ಈ ಸಲ ಕಾಂಗ್ರೆಸ್ ಗೆಲುವು ಅಷ್ಟು ಸುಲಭದ್ದಲ್ಲ. ಹೀಗಾಗಿ ಹೇಗಾದರೂ ಮಾಡಿ ಈ ಸಲವೂ ಬೆಂಗಳೂರು ಗ್ರಾಮಾಂತರವನ್ನು ಗೆಲ್ಲಬೇಕು ಎಂದು ಪಣತೊಟ್ಟಿರುವ ಡಿಕೆ ಬ್ರದರ್ಸ್ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷ(ಬಿ.ಎಸ್.ಪಿ.) ಅಭ್ಯರ್ಥಿ ಚಿನ್ನಪ್ಪ ವೈ. ಚಿಕ್ಕಹಾಗಡೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಅವರೇ ಕಾರಣ ಎಂದು ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಿತೂರಿಯಿಂದಾಗಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸಹೋದರರ ಧಮ್ಕಿಗೆ ಹೆದರಿ ಬಿಎಸ್ಪಿ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಮಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಡಿ.ಕೆ. ಸುರೇಶ್ ಹಠಕ್ಕೆ ಬಿದ್ದಿರುವ ಕಾರಣ ವಾಮಮಾರ್ಗದಲ್ಲಿ ಅಭ್ಯರ್ಥಿಗಳ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


