ತುಮಕೂರು: ಪ್ರತಿನಿತ್ಯ ಮನುಷ್ಯರು ಬಳಸುವ ಎಲ್ಲಾ ಔಷಧಿಗಳಲ್ಲಿರುವ ರಾಸಾಯನಿಕಗಳನ್ನು ಆವಿಷ್ಕರಿಸುವಲ್ಲಿ ಹಾಗೂ ಅವುಗಳ ರಚನೆಯನ್ನು ಅಧ್ಯಯನ ಮಾಡುವಲ್ಲಿ ಸ್ಪೆಕ್ಟ್ರೋಸ್ಕೋಪಿ ಅತಿ ಅವಶ್ಯವಾದ ಪಾತ್ರವನ್ನು ವಹಿಸುತ್ತದೆ. ಅಂತಹ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದ ಮೂಲತತ್ವಗಳು ಹಾಗೂ ನಿರಂತರವಾಗಿ ನಡೆಯುತ್ತಿರುವ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ಅತ್ಯಗತ್ಯ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಸವರಾಜ ಪದ್ಮಶಾಲಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಗುರುವಾರ ಆಯೋಜಿಸಿದ್ದ ‘ಸ್ಪೆಕ್ಟ್ರೋಸ್ಕೋಪಿ ಟೆಕ್ನಿಕ್ಸ್’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಮನೋಹರ್ ಶಿಂದೆ ಮಾತನಾಡಿ, ಸ್ಪೆಕ್ಟ್ರೋಸ್ಕೋಪಿ ವಿಷಯವು ರಾಸಾಯನಿಕ ತಜ್ಞರ ದೈನಂದಿನ ಜೀವನಾಡಿಯಾಗಿದ್ದು, ಮನುಷ್ಯರಿಗೆ ಸಹಕಾರಿಯಾಗಿರುವ ಹಲವಾರು ಕ್ಷೇತ್ರಗಳಲ್ಲಿ ತುಂಬ ಉಪಯುಕ್ತವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ರವೀಂದ್ರ ಕಾಂಬ್ಳೆ ಮಾತನಾಡಿ ಸ್ಪೆಕ್ಟ್ರೋಸ್ಕೋಪಿಯು ರಸಾಯನಶಾಸ್ತ್ರದ ಆತ್ಮವಾಗಿದೆ. ಗ್ರಾಮೀಣ ಪ್ರದೇಶವನ್ನು ಬಿಟ್ಟು ಬರಲು ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲವಾದ್ದರಿಂದ ಇಂತಹ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಅಂತಹ ಮನಸ್ಥಿತಿಯಿಂದ ಹೊರಬಂದು ಮುಕ್ತವಾದ ಪ್ರಪಂಚವನ್ನು ನೋಡಬೇಕಿದೆ. ಕೃತಕ ಬುದ್ಧಿಮತ್ತೆಯನ್ನು ರಸಾಯನಶಾಸ್ತ್ರ ವಿಷಯದಲ್ಲಿ ಪರಿಣಾಮಕಾರಿಯಾಗಿ ಬಳಸುವ ಅವಶ್ಯಕತೆ ಇದೆ ಎಂದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಪ್ರಕಾಶ್ ಎಂ. ಮಾತನಾಡಿ, ರಸಾಯನಶಾಸ್ತ್ರವು ಕಬ್ಬಿಣದ ಕಡಲೆಯಲ್ಲ. ಗಮನವಿಟ್ಟು ಅಧ್ಯಯನ ನಡೆಸಿದರೆ ಎಲ್ಲವೂ ಸುಲಭ. ಎಲ್ಲ ಕ್ಷೇತ್ರಗಳಿಗೂ ಈ ವಿಷಯ ಅನಿವಾರ್ಯವಾಗಿದೆ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಇದರ ಕುರಿತದ ಪ್ರಶ್ನೆಗಳು ಇರುತ್ತವೆ. ತರಗತಿಗಳ ಜೊತೆಗೆ ಪ್ರಯೋಗಾಲಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಾವಯವ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ.ಡಿ.ಸುರೇಶ್, ಪ್ರಾಧ್ಯಾಪಕ ಡಾ.ಎಸ್.ಶ್ರೀನಿವಾಸ, ಡಾ. ಅರುಣ್ ಕುಮಾರ್, ಡಾ. ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4