ತುಮಕೂರು: ಜಿಲ್ಲೆಯ ಸಿರಿಧಾನ್ಯ ಬೆಳೆಯನ್ನು 10,000 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ–2025ರ ಪ್ರಯುಕ್ತ ಕೃಷಿ ಇಲಾಖೆಯಿಂದ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಭೂಮಿಯಲ್ಲಿ 6,000 ಹೆ. ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯವನ್ನು ಬೆಳೆಯಲಾಗುತ್ತಿದ್ದು, ಅದನ್ನು 10,000 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳ ಬಳಕೆ, ಖರೀದಿಸುವವರ ಸಂಖ್ಯೆ ಕಡಿಮೆ ಇರುವುದರಿಂದ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆಯಿಲ್ಲದೆ ರೈತರು ಸಿರಿಧಾನ್ಯ ಬೆಳೆಯಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ 10,000 ರೂ.ಗಳ ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದರಲ್ಲದೆ ಸಿರಿಧಾನ್ಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಈ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಲಾದ ಸಾಮೆ ಪಾಲಾಕ್ ಪನ್ನೀರ್ ರೈಸ್, ರಾಗಿ ಉಪ್ಪಿಟ್ಟು, ನವಣೆ ಹಲ್ವಾ, ಹುರುಳಿಕಾಳು ತೊಕ್ಕು, ರಾಗಿ ಉಪ್ಪಿಟ್ಟು, ಪೊಂಗಲ್, ಪಾಯಸ, ಉಪ್ಪಿಟ್ಟು, ಕರ್ಜಿಕಾಯಿ, ಮತ್ತಿತರ ತಿನಿಸುಗಳ ರುಚಿ ಸವಿದ ಅವರು ಅಕ್ಕಿಯಿಂದ ತಯಾರಿಸುವ ತಿನಿಸುಗಳಿಗಿಂತ ಈ ಖಾದ್ಯಗಳು ರುಚಿಯಾಗಿವೆ. ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಸೇವಿಸಿದಲ್ಲಿ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳನ್ನು ನಿಯಂತ್ರಣಕ್ಕೆ ತರಬಹುದಲ್ಲದೆ ಸಮತೋಲನವನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.
ಮರೆತು ಹೋದ ಸಿರಿಧಾನ್ಯ ಖಾದ್ಯಗಳನ್ನು ತಯಾರಿಸಿರುವುದು ಅಭಿನಂದನಾರ್ಹ. ನೂಡಲ್ಸ್, ಬರ್ಗರ್, ಪಿಜ್ಜಾಗಳಂತಹ ಫಾಸ್ಟ್ ಫುಡ್ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ. ದೇಶಿ ಉತ್ಪನ್ನಗಳಾದ ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಸೇವಿಸಿ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು ಪ್ರೋಟೀನ್ ಸೇರಿದಂತೆ ಉತ್ತಮ ಪೋಷಕಾಂಶವುಳ್ಳ ಸಿರಿಧಾನ್ಯ ಸೇವೆನೆಯಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ದೇಶವಾಗಿ ಹೊರ ಹೊಮ್ಮುತ್ತಿದೆ. ನಮ್ಮ ಆಹಾರ ಶೈಲಿಗಳನ್ನು ಬದಲಾಯಿಸಿಕೊಳ್ಳಬೇಕು. ಹಿರಿಯರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದುದರಿಂದ ಗಟ್ಟಿಮುಟ್ಟಾಗಿದ್ದರು. ಸಿರಿಧಾನ್ಯಗಳನ್ನು ಜನರ ಜೀವನ ಶೈಲಿಗೆ ಮತ್ತೊಮ್ಮೆ ತರಬೇಕೆಂಬ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಸಿರಿಧಾನ್ಯ ಮೇಳವನ್ನು ಏರ್ಪಡಿಸಿ ಸಿರಿಧಾನ್ಯ ಬಳಕೆಯಿಂದಾಗುವ ಲಾಭಾಂಶಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ವಿಶ್ವಸಂಸ್ಥೆಯು ಕಳೆದ 2023ನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತ್ತು. ಅದರ ಭಾಗವಾಗಿ ಜಿಲ್ಲೆಯ ಸಿರಿಧಾನ್ಯ ಬೆಳೆಗಾರರನ್ನು ಮತ್ತು ಸಿರಿಧಾನ್ಯ ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳೆಯರು ಸಿರಿಧಾನ್ಯ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬಂದಿರುವುದು ಸಂತಸ ತಂದಿದ್ದು, ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಬೇಕೆಂದು ಸಲಹೆ ನೀಡಿದರು.
ಹಲವಾರು ರೋಗಗಳಿಗೆ ಸಿರಿಧಾನ್ಯ ಬಳಕೆ ರಾಮಬಾಣವಾಗಿದೆ. ನಮ್ಮ ಭಾರತೀಯ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಸಿರಿಧಾನ್ಯಗಳು ಆರೋಗ್ಯವರ್ಧನೆಗೆ ಪೂರಕವಾಗಿವೆ. ಜನ ಸಾಮಾನ್ಯರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ರೋಗ ಮುಕ್ತರಾಗಿರಲು ಸಾಧ್ಯವೆಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ, ರಾಜ್ಯದಲ್ಲಿ ಸಿರಿಧಾನ್ಯ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಮೊದಲು ಚಿತ್ರದುರ್ಗ. ಎರಡನೆಯದು ತುಮಕೂರು ಜಿಲ್ಲೆ. ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಸಿರಿಧಾನ್ಯ ಬೆಳೆಯುವ ಹಾಗೂ ಬಳಕೆ ಮಾಡುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ ಎಂದರಲ್ಲದೆ ಸಿರಿಧಾನ್ಯ ಖಾದ್ಯ ತಯಾರಿಸುವವರು ಮುಂದೆ ಬಂದರೆ ಅಗತ್ಯ ತರಬೇತಿ, ಮಾರುಕಟ್ಟೆ ವ್ಯವಸ್ಥೆ, ಸಹಾಯಧನ, 4 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧಾ ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನವಾಗಿ 5,000ರೂ., ದ್ವಿತೀಯ-3,000 ಹಾಗೂ ತೃತೀಯ ಬಹುಮಾನವಾಗಿ 2,000 ರೂ.ಗಳ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಪರ್ಧಿಗಳು ಸಿರಿಧಾನ್ಯದಿಂದ ತಯಾರಿಸಿದ ವಿವಿಧ ಖಾದ್ಯಗಳ ಸ್ವಾದವನ್ನು ಸವಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದಿಸಿದ ಅವರು, ರಾಜ್ಯ ಮಟ್ಟದಲ್ಲೂ ಸಹ ಜಿಲ್ಲೆಯನ್ನು ಪ್ರತಿನಿಧಿಸಿ ಬಹುಮಾನ ಗೆಲ್ಲಬೇಕು ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿರಿಧಾನ್ಯ ಖಾದ್ಯ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜೆ ನಾಗರತ್ನ, ದ್ವಿತೀಯ ಸ್ಥಾನ ಗಳಿಸಿದ ಬಿ. ತುಳಸಿ, ತೃತೀಯ ಸ್ಥಾನ ಪಡೆದ ಎಸ್.ಆರ್. ಶಶಿಕಲಾ ಹಾಗೂ ಮರೆತು ಹೋದ ಖಾದ್ಯ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ಕೆ.ನಳಿನ, ದ್ವಿತೀಯ ಬಹುಮಾನ ಪಡೆದ ಪ್ರಗತಿ ಜಿ.ಆರ್. ಹಾಗೂ ತೃತೀಯ ಬಹುಮಾನ ಗಳಿಸಿದ ನಾಗಶ್ರೀ ಸಿ.ವಿ. ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗದ ವಿಜ್ಞಾನಿ ಡಾ.ಸಿಂಧು ಪಿ.ಬಿ., ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರಾಧ ಬಣಕಾರ್ ಆಗಮಿಸಿದ್ದರು. ವಿಜೇತರಿಗೆ 2025ರ ಜನವರಿ ಮಾಹೆಯಲ್ಲಿ ಏರ್ಪಡಿಸಲಾಗುವ ಸಿರಿಧಾನ್ಯ ಮೇಳದಲ್ಲಿ ನಗದು ಬಹುಮಾನ ವಿತರಿಸಲಾಗುವುದು.
ಕೃಷಿ ಉಪನಿರ್ದೇಶಕ ಹುಲಿರಾಜು ಹಾಗೂ ಹೆಚ್.ಸಿ. ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕ ಗಿರಿಜಮ್ಮ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ, ಸ್ಪರ್ಧಿಗಳು ಹಾಜರಿದ್ದರು.
ಸ್ಪರ್ಧೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ತುಮಕೂರಿನ ಹೆಚ್.ಡಿ ನಾಗರತ್ನಮ್ಮ ಅವರ ತಂಬಿಟ್ಟು, ಪ್ರಣತಿ ಅವರ ರಾಗಿ ಉಪ್ಪಿಟ್ಟು, ಶಾರದಾಂಬ ಅವರ ನವಣೆ ಬಿಸಿಬೇಳೆ ಬಾತ್, ರಮೇಶ್ ಅವರ ಬರಗು ಪೊಂಗಲ್, ವೀಣಾ ಮಲ್ಲಪ್ಪ ಅವರ ಸಾಮೆ ಇಡ್ಲಿ ಹಾಗೂ ಮರಗೆಣಸು ಸಿಹಿ ಚಟ್ನಿ, ಚಿಕ್ಕತಾಯಮ್ಮ ಅವರ ನವಣೆ ಪಾಯಸ ಹಾಗೂ ಸಿಹಿ ಉಂಡೆ, ನಳಿತ ಅವರ ಬುತ್ತಿ ಖಾರದ ಗೊಜ್ಜು ಹಾಗೂ ಹುರುಳಿ ಕಾಳು ತೊಕ್ಕು, ಶಶಿಕಲಾ ಅವರ ಸಾಮೆ ಕಡುಬು ಹಾಗೂ ಸಿರಿಧಾನ್ಯಗಳ ಒತ್ತು ಶಾವಿಗೆ, ನಿರ್ಮಲ ಅವರ ಸಾಮೆ ಹುಗ್ಗಿ, ತುಳಸಿ ಬಾಲರಾಜು ಅವರ ನವಣೆ ಹಲ್ವ ಹಾಗೂ ಸಜ್ಜೆ ನಿಪ್ಪಟ್ಟು; ಕೆ.ಜೆ. ನಾಗರತ್ನ ಅವರ ಸಾಮೆ ಪಾಲಾಕ್ ಪನ್ನೀರ್ ರೈಸ್, ನವಣೆ ಗಟ್ಟಕ್ಕಿ ಪಾಯಸ ಹಾಗು ಮುರ್‌ಮುರೆ; ಸುಧಾಮಣಿ ಅವರ ನಿಪಟ್ಟು ಹಾಗೂ ಸುರುಳಿ ಪೂರಿ, ಊರುಕೆರೆ ಸೌಮ್ಯ ಅವರ ದಿಲ್‌ಪಸಂದ್ ಹಾಗೂ ಸಮೋಸ, ಪ್ರಭಾವತಮ್ಮ ಅವರ ರಾಗಿ ಉಂಡೆ ಹಾಗೂ ಸಿಹಿ/ಖಾರ ಪೊಂಗಲ್, ಶಿರಾ ತಾಲೂಕಿನ ಎಸ್. ಅನು ಅವರ ಸಾಮೆ ಸಿಹಿ ಪೊಂಗಲ್, ನಾಗಶ್ರೀ ಅವರ ಅಂಬಲಿ, ತಿಪಟೂರಿನ ಲತಾಮಣಿ ಅವರ ನವಣೆ ಒಬ್ಬಟ್ಟು; ಲೋಕಮ್ಮ ಅವರ ನವಣೆ, ಕರ್ಜಿಕಾಯಿ, ಹಾರಕ ನಿಪ್ಪಟ್ಟು, ಕಜ್ಜಾಯ, ಊದಲು ಲಡ್ಡು ಖಾದ್ಯಗಳು ಒಂದಕ್ಕಿಂತ ಒಂದು ರುಚಿಯಾದ್ದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q