ಮೈಸೂರು: ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗೆಟ್ಟಿದ್ದು, ಬೆಳೆ ಪರಿಹಾರವಾಗಿ ಎಕರೆಗೆ ಕೇವಲ 2,500 ರೂಪಾಯಿ ಘೋಷಿಸಿರುವುದನ್ನು ನೋಡಿದರೆ ಸರ್ಕಾರ “ಬೆಟ್ಟ ಅಗೆದು ಇಲಿ ಹಿಡಿಯಲು ಹೊರಟಿರುವಂತಿದೆ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ವಿಷಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ನೆರವಿಗೆ ಧಾವಿಸದ ರಾಜ್ಯ ಸರ್ಕಾರ, ಬೆಳೆ ಪರಿಹಾರವಾಗಿ ಎಕರೆಗೆ ಕೇವಲ 2,500 ರೂ. ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ರೈತರ ಪರವಾಗಿರಬೇಕಿತ್ತೆಂದ ಅವರು, ಕನಿಷ್ಠ 25 ಸಾವಿರ ರೂಪಾಯಿಯನ್ನಾದರೂ ನೀಡಬೇಕಿತ್ತು, ಆದರೆ ಕೇವಲ 2,500 ರೂ. ಘೋಷಿಸಿರುವುದು ಈ ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಇದೇ ವೇಳೆ ಎಸ್ಐಆರ್ ವಿರೋಧಿಸಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಹೊರಟಿರುವುದಕ್ಕೆ ತಿರುಗೇಟು ನೀಡಿದ ಅವರು, ಇದು ಕಾಂಗ್ರೆಸ್ ಗಾಗಲಿ, ಬಿಜೆಪಿಗಾಗಲಿ ಅಥವಾ ಇನ್ನಾವುದೇ ಪಕ್ಷಕ್ಕಾಗಲಿ ಸಂಬಂಧಿಸಿದ್ದಲ್ಲ, ಬದಲಿಗೆ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು ಎಂದರು.
ಬಿಜೆಪಿ ಅಧಿಕಾರಾವಧಿಗೂ ಮುನ್ನ ಕಾಂಗ್ರೆಸ್ ಅಧಿಕಾರಾವಧಿಯಲ್ಲೂ ಈ ಪ್ರಕ್ರಿಯೆ ನಡೆದಿತ್ತು. ಪ್ರಜೆಗಳೇ ಅಲ್ಲದವರು, ಎರಡು ಕಡೆ ಹೆಸರಿದ್ದವರು ಹಾಗೂ ಮರಣ ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ತೆಗೆದರೆ ಕಾಂಗ್ರೆಸ್ ಪಕ್ಷಕ್ಕೇನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಬಾಂಗ್ಲಾದೇಶಿಯರು ಮತ್ತು ಪಾಕಿಸ್ತಾನಿಯರು ನಿಮ್ಮ ಪಕ್ಷದವರಾಗಿದ್ದರೆ ಅಂತಹವರನ್ನು ಬಿಡಬೇಕೆ ಎಂದು ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ದಲಿತರ ಮಾರಣಹೋಮವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಇದರ ಕುರಿತು ಮಾತನಾಡದೆ ಸಚಿವರು ಕೇವಲ ಆರ್ ಎಸ್ ಎಸ್, ನಾಗ್ಪುರ ಹಾಗೂ ಚೆಡ್ಡಿ ವಿಷಯಗಳ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಹಾಗೂ ಬಿ.ಕೆ. ಹರಿಪ್ರಸಾದ್ ಅವರನ್ನು ಆರ್ ಎಸ್ ಎಸ್ ಇನ್ಚಾರ್ಜ್ ಮಾಡಿ ಎಂದು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಅವರ ಕುರಿತಾದ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಮತ್ತು ಸಮುದಾಯಗಳು ಯಾವುದೇ ಪಕ್ಷದ ಗುಲಾಮರಲ್ಲ ಎಂದು ಹೇಳಿದ ಅವರು, ಮುಖ್ಯಮಂತ್ರಿಯವರು ಎಲ್ಲಾ ಸ್ವಾಮೀಜಿಗಳ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇನ್ನು ದಸರಾ ಉಸ್ತುವಾರಿ ಕುರಿತು ಮಾತನಾಡಿ, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನೆ ವಸ್ತುಗಳನ್ನು ಜೋಡಿಸಲಿಕ್ಕೂ ಪುರುಸೊತ್ತಿಲ್ಲ, ಇನ್ನು ದಸರಾ ಉಸ್ತುವಾರಿ ಮಾಡಲು ಸಮಯವೆಲ್ಲಿರುತ್ತದೆ ಎಂದು ಕುಹಕವಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
