ಪಾಟ್ನಾ: ಹಲವು ವರ್ಷಗಳ ಸಂಘರ್ಷದ ಬಳಿಕ ಎಲ್ಜೆಪಿ (ರಾಮ್ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ನಿರ್ಣಾಯಕ ಗೆಲುವು ಸಾಧಿಸಿದ್ದು, 2020ರ ಅಕ್ಟೋಬರ್ನಲ್ಲಿ ಮೃತಪಟ್ಟ ರಾಮ್ ವಿಲಾಸ್ ಪಾಸ್ವಾನ್ ಅವರ ನೈಜ ರಾಜಕೀಯ ಉತ್ತರಾಧಿಕಾರಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಎನ್ ಡಿಎ ಮೈತ್ರಿಕೂಟದ ಘಟಕ ಪಕ್ಷವಾಗಿ ಸ್ಪರ್ಧಿಸಿದ್ದ ಎಲ್ಲ ಐದು ಕ್ಷೇತ್ರಗಳಲ್ಲಿ ಇವರ ಪಕ್ಷ ಗೆಲುವು ಸಾಧಿಸಿದೆ. ತಮ್ಮ ಪಕ್ಷದ ಶೇಕಡ 100ರಷ್ಟು ಗೆಲುವಿನ ಸಾಧನೆಯನ್ನು ಮುಂದುವರಿಸಿರುವ ಜತೆಗೆ ಬಿಹಾರದ ರಾಜಕೀಯ ರಂಗದಲ್ಲಿ ಹೊಸ ದಲಿತ ಐಕಾನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 2019ರ ಚುನಾವಣೆಯಲ್ಲಿ ಕೂಡಾ ರಾಮ್ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಎಲ್ಜೆಪಿ, ಎನ್ ಡಿಎ ಸೀಟು ಹೊಂದಾಣಿಕೆಯಡಿ ಹಂಚಿಕೆಯಾಗಿದ್ದ ಎಲ್ಲ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಚಿರಾಗ್ ಪಕ್ಷಕ್ಕೆ ಐದು ಸ್ಥಾನಗಳನ್ನು ಈ ಬಾರಿ ಹಂಚಿಕೆ ಮಾಡಿ ಅವರ ಎದುರಾಳಿ ಹಾಗೂ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್ ನೇತೃತ್ವದ ರಾಷ್ಟ್ರೀಯ ಲೋಕ ಜಯಶಕ್ತಿ ಪಕ್ಷಕ್ಕೆ ಯಾವುದೇ ಕ್ಷೇತ್ರವನ್ನು ನೀಡದಿರುವುದು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಈಗ ತಮ್ಮ ಪರಿಪೂರ್ಣ ಜಯದೊಂದಿಗೆ ಬಿಜೆಪಿಯ ನಿರ್ಧಾರ ಸರಿ ಎನ್ನುವುದನ್ನು ದೃಢಪಡಿಸಿದ್ದಾರೆ.
ಎಲ್ಜೆಪಿ(ಆರ್ವಿ) ಹಾಜಿಪುರ, ವೈಶಾಲಿ, ಸಮಷ್ಟಿಪುರ, ಖಗಾರಿಯಾ ಮತ್ತು ಜಮೂಯಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ತಂದೆಯಿಂದ ರಾಜಕೀಯ ಮಾರ್ಗದರ್ಶನ ಇಲ್ಲದೇ, ಚಿಕ್ಕಪ್ಪ ಪರಸ್ ಹಾಗೂ ಸಹೋದರ ಸಂಬಂಧಿ ಪ್ರಿನ್ಸ್ರಾಜ್ ಪ್ರಚಾರದಿಂದ ದೂರ ಉಳಿದರೂ ತಮ್ಮದೇ ಸ್ವಪ್ರಯತ್ನದಲ್ಲಿ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿ ಅದ್ಭುತ ಗೆಲುವಿನ ರೂವಾರಿ ಎನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


