ಬೆಂಗಳೂರು: ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಸದ್ಯ ಹಲಸೂರು ಗೇಟ್ ಪೊಲೀಸರು ಈತನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 6 ಲಕ್ಷದ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ವಾಲ್ಮೀಕಿ ನಗರದ ನಿವಾಸಿಯಾಗಿರುವ ಇಮ್ರಾನ್ ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಈತನ ವಿರುದ್ಧ ಬೆಂಗಳೂರಿನಲ್ಲಿಯೇ 30 ಪ್ರಕರಣ ದಾಖಲಾಗಿವೆ. ರಾಜ್ಯದ ಹಲವು ಕಡೆಗಳಲ್ಲಿ ಇಮ್ರಾನ್ ವಿರುದ್ಧ 60ಕ್ಕಿಂತ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿಬಂದಿದ್ದರೂ ಒಂದು ಪ್ರಕರಣದಲ್ಲಿ ಈತನಿಗೆ ಶಿಕ್ಷೆಯಾಗಿರಲಿಲ್ಲ.ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ತನ್ನ ಚಾಳಿ ಕೈಚಳಕ ತೋರುತ್ತಿದ್ದ.
ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಯಾಸೀನ್, ಏಕಾಂಗಿಯಾಗಿ ಸುಖಾಸುಮ್ಮನೆ ತಿರುಗುತ್ತಿದ್ದ. ಮನೆಯಲ್ಲಿ ಅಥವಾ ಅಂಗಡಿ-ಕಚೇರಿಗಳಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದ. ಕೃತ್ಯದ ಬಳಿಕ ಗೋವಾ, ಮೈಸೂರು ಹಾಗೂ ರಾಯಚೂರು ಸೇರಿ ಹಲವು ಕಡೆಗಳಲ್ಲಿ ಕದ್ದ ಮಾಲುಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದ.
ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಯಾಸೀನ್ ತಂದೆ ಎಜಾಜ್ ಖಾನ್ ಆಲಿಯಾಸ್ ದಾದಾಪೀರ್ ಈ ಹಿಂದೆ ಕೆಲ ಕಾಲ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡಿದ್ದ ಎಜಾಜ್ ಖಾನ್ ತನ್ನ ಮಗ ಯಾಸೀನ್ ಗೆ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಲ್ಲದೇ, ಆತನಿಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನ ಮಾಡುವುದರ ಬಗ್ಗೆ ತರಬೇತಿ ನೀಡಿದ್ದ. ಅಪ್ಪನಿಂದ ಕಳ್ಳತನದ ಟ್ರೈನಿಂಗ್ ಪಡೆದಿದ್ದ ಚೋರ್ ಇಮ್ರಾನ್ ಎಂತಹುದೇ ಭದ್ರತೆ ಇದ್ದರೂ ಮನೆಗಳಿಗೂ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಕಳೆದ ತಿಂಗಳು ಎಜಾಜ್ ಖಾನ್ ನನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy