ಕರ್ನಾಟಕದಲ್ಲಿ ಅನ್ಯ ಭಾಷಾ ಸಿನಿಮಾಗಳು ಬಿಡುಗಡೆಯಾದಾಗ 1500 ರೂ ಗಳಿಂದ 2000 ರೂ ಗಳವರೆಗೂ ಟಿಕೆಟ್ ಬೆಲೆ ಹೆಚ್ಚಿಸಲಾಗುತ್ತಿದೆ. ಇದರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದ್ದು, ಏಕ ರೂಪದ ಟಿಕೆಟ್ ದರ ವಿಧಿಸಲು ಇದೀಗ ಒತ್ತಾಯ ಕೇಳಿ ಬಂದಿದೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ಸಾ.ರಾ.ಗೋವಿಂದು, ವಿತರಕರಿಗೆ ಈಗಲೇ ಹೇಳುತ್ತೇವೆ, ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ. ಮುಂದೆ ಟಿಕೆಟ್ ದರ 200 ರೂಪಾಯಿ ಆಗುತ್ತದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ 180, 150 ಟಿಕೆಟ್ ದರ ಇದ್ದರೆ ಇಲ್ಲಿ 1200 ರೂಪಾಯಿ ಇದೆ. ಪುಷ್ಪ 2 ಚಿತ್ರಕ್ಕೆ 200 ರೂಪಾಯಿಗಿಂತ ಜಾಸ್ತಿ ದರ ಇಟ್ಟರೆ ಅದರಿಂದ ದೊಡ್ಡ ತೊಂದರೆ ಆಗಲಿದೆ. ಥಿಯೇಟರ್‌ಗಳಿಗೆ ಮುತ್ತಿಗೆ ಹಾಕಲಾಗುತ್ತದೆ. ಮಲ್ಟಿಪ್ಲೆಕ್ಸ್‌ನಲ್ಲಿ ರಜನಿಕಾಂತ್ ಚಿತ್ರಕ್ಕೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗೆ 2 ಶೋ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ ಮಾಡಿದ್ದರು’ ಎಂದಿದ್ದಾರೆ.
ಸದ್ಯ ಪರಭಾಷೆಯ ಚಿತ್ರಗಳ ವಿಷಯಕ್ಕೆ ಬರುವುದಾದರೆ ಅಲ್ಲು ಅರ್ಜುನ್ ನಟನೆಯ “ಪುಷ್ಪ–2′ ಮೇಲೆ ಭರ್ಜರಿ ನಿರೀಕ್ಷೆ ಇದೆ. ಎಲ್ಲಾ ರಾಜ್ಯಗಳು ಈ ಚಿತ್ರಕ್ಕೆ ದೊಡ್ಡ ಮೊತ್ತ ಕೊಟ್ಟು ವಿತರಣಾ ಹಕ್ಕು ಪಡೆಯುತ್ತಿವೆ. ಇದರಲ್ಲಿ ಕರ್ನಾಟಕ ಕೂಡಾ ಸೇರಿದೆ. ಆದರೆ, ಸದ್ಯ ಏಕರೂಪ ಟಿಕೆಟ್ ದರ ಹೋರಾಟ ಹೆಚ್ಚಿರುವುದರಿಂದ ಇದು ಪುಷ್ಪ ಮೇಲೆ ನೇರ ಪರಿಣಾಮ ಬೀರಲಿದೆ. ಈ ಕುರಿತು ಮಾತನಾಡುವ ನಿರ್ಮಾಪಕ ಟೆ.ಶಿ. ವೆಂಕಟೇಶ್, “ನವೆಂಬರ್ 15ರೊಳಗೆ ಸರ್ಕಾರದ ಆದೇಶ ಹೊರಡಿಸದೇ ಹೋದರೆ ತೆಲುಗಿನ ಪುಷ್ಪ ಚಿತ್ರವನ್ನು ರಿಲೀಸ್ ಮಾಡಲು ಬಿಡುವುದಿಲ್ಲ. 200 ರೂಪಾಯಿ ಟೆಕೆಟ್ ದರ ನಿಗದಿ ಮಾಡಿದರೆ ಮಾತ್ರ ಪುಷ್ಪ ಸಿನಿಮಾ ರಿಲೀಸ್ ಮಾಡಬಹುದು’ ಎಂದಿದ್ದಾರೆ.