ತುಮಕೂರು: ತಹಶೀಲ್ದಾರ್ ಸಿದ್ದೇಶ್ ಅವರನ್ನೊಳಗೊಂಡಂತೆ ಗೂಳೂರು ಹೋಬಳಿ ರಾಜಸ್ವ ನಿರೀಕ್ಷಕರಾದ ಕುಮಾರ್, ರಮೇಶ್ ಕುಮಾರ್ ಹಾಗೂ ಕೌತ ಮಾರನಹಳ್ಳಿ ವೃತ್ತದ ಗ್ರಾಮಲೆಕ್ಕಿಗ ಭವ್ಯ ಅವರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಆದಿ ದ್ರಾವಿಡ ಸಮುದಾಯ(SC)ಕ್ಕೆ ಸೇರಿದ ಯಲ್ಲಪ್ಪ ಎಂಬವರು ಪೊಲೀಸ್ ಉಪಾಧೀಕ್ಷಕರಿಗೆ ದೂರು ನೀಡಿದ್ದಾರೆ.
ಗೌರಿಪುರ ಸರ್ವೇ ನಂಬರ್ 5ರಲ್ಲಿ ಸರ್ಕಾರವು 1988ರಲ್ಲಿ ತನ್ನ ಹೆಸರಿಗೆ ಸಾಗುವಳಿ ಪತ್ರ ನೀಡಿ 1.16 ಎಕರೆ ಜಮೀನು ಮಂಜೂರು ಮಾಡಿತ್ತು. ಇದೇ ಸರ್ವೇ ನಂಬರ್ ನಲ್ಲಿ ಇತರೆ ಹಿಡುವಳಿದಾರರ ಹೆಸರು ಜಂಟಿ ಪಹಣಿಯಲ್ಲಿ ನಮೂದಾಗಿದ್ದು, ಇದುವರೆಗೂ ತನ್ನ ಜಮೀನು ದುರಸ್ತಿಯಾಗಿರುವುದಿಲ್ಲ. ಸರಿಪಡಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಆದ್ದರಿಂದ ಆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ದೂರು ಸಲ್ಲಿಸುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಆದಿ ದ್ರಾವಿಡ ಜಾತಿಗೆ ಸೇರಿದ ಯಲ್ಲಪ್ಪ ಅವರಿಗೆ ಸರ್ಕಾರ 1.16 ಎಕರೆ ಜಮೀನನನ್ನು ಮಂಜೂರು ಮಾಡಿತ್ತು. ಅದರಂತೆ ಸಾಗುಳಿಯಂತೆ ಪಹಣಿ ಕೂಡ ಪ್ರತ್ಯೇಕವಾಗಿ ಬರ್ತಾ ಇರುತ್ತೆ. ಅದಾದ ನಂತರ ಒಟ್ಟುಗೂಡಿಸ್ತಾರೆ. ಒಟ್ಟುಗೂಡಿಸಿದ ನಂತರ ಅವರಿಗೆ ಸಾಲ ಸೌಲಭ್ಯಗಳು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಮಕ್ಕಳ ಮದುವೆ ಮಾಡಲು ಆಗುವುದಿಲ್ಲ, ಜೀವನ ನಡೆಸಲು ಕಷ್ಟವಾಗಿತ್ತು. ವ್ಯವಸಾಯ ಮಾಡಲು ತುಂಬಾ ತೊಂದರೆ ಆಗಿದೆ. ಹಾಗಾಗಿ ಅವರು ನಮ್ಮ ಸಮಿತಿಯ ಬಳಿ ಬಂದಿದ್ದಾರೆ. ಆಗ ನಾವು ಸರ್ವೇ ಇಲಾಖೆಗೆ ಯಲ್ಲಪ್ಪ ಮುಖಾಂತರ ಒಂದು ಪತ್ರ ಬರೆಸಿದೆವು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ತುಮಕೂರು ಸರ್ವೇ ಇಲಾಖೆ ತಹಶೀಲ್ದಾರ್ ಗೆ ಆದ್ರೆ ತುಮಕೂರು ತಹಶೀಲ್ದಾರ್ ಸಿದ್ದೇಶ್ ಅವರು, 10ರಿಂದ 11 ತಿಂಗಳು ಆದರೂ ಈವರೆಗೂ ಅರ್ಜಿಯನ್ನು ಆಲಿಸದೇ, ಸರ್ಕಾರಿ ಸೌಲಭ್ಯ ಕೊಡದೇ ಕರ್ತವ್ಯ ಲೋಪ ಮಾಡಿದ್ದಾರೆ ಎಂದರು ತಿಳಿಸಿದರು.
ಸಂವಿಧಾನದಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರಿ ಸೇವೆ ಕೊಡೋದಕ್ಕೆ ಯಾವ ಅಧಿಕಾರಿಗಳು ವಿಫಲರಾಗುತ್ತಾರೆ. ಅವರ ವಿರುದ್ಧವಾಗಿ ದೂರು ದಾಖಲಿಸುವ ಅವಕಾಶವಿದೆ. ಅದನ್ನು ಇಂದು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಾವು ಮಾಡಿದ್ದೇವೆ. ಅಟ್ರಾಸಿಟಿಯನ್ನು ನಾವು ಎಲ್ಲೂ ದುರುಪಯೋಗ ಪಡಿಸಿಕೊಳ್ತಾ ಇಲ್ಲ, ಸತ್ಯಾಸತ್ಯತೆಯನ್ನು ಕಂಡು ಪರಿಶೀಲಿಸಿ ಯಲ್ಲಪ್ಪ ಅವರ ಮೂಲಕ ಅರ್ಜಿಯನ್ನು ನೀಡಲಾಗಿದೆ. ಡಿವೈಎಸ್ ಪಿ ಅವರು ಅರ್ಜಿಯನ್ನು ಸ್ವೀಕಾರ ಮಾಡಿದ್ದಾರೆ. ಸಂಜೆಯವರೆಗೆ ನಮಗೆ ಕಾಲಾವಕಾಶಕೊಡಿ ಎಂದು ಕೇಳಿದ್ದಾರೆ. ಅವರು ಎಫ್ ಐಆರ್ ಮಾಡಿಲ್ಲವಾದರೆ, ಡಿವೈಎಸ್ ಪಿ ಅವರನ್ನು ಒಳಗೊಂಡಂತೆ, ತಹಶೀಲ್ದಾರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇವೆ ಎಂದು ಅವರು ತಿಳಿಸಿದರು.
ತಹಶೀಲ್ದಾರ್ ಸಿದ್ದೇಶ್ ಅವರನ್ನೊಳಗೊಂಡಂತೆ ಗೂಳೂರು ಹೋಬಳಿ ರಾಜಸ್ವ ನಿರೀಕ್ಷಕರಾದ ಕುಮಾರ್, ರಮೇಶ್ ಕುಮಾರ್ ಹಾಗೂ ಕೌತ ಮಾರನಹಳ್ಳಿ ವೃತ್ತದ ಗ್ರಾಮಲೆಕ್ಕಿಗ ಭವ್ಯ ಅವರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಆದರೆ ಈವರೆಗೆ ಎಫ್ ಐಆರ್ ದಾಖಲಾಗಿಲ್ಲ. ಕ್ರಮಕೈಗೊಳ್ಳುತ್ತಾರಾ ಎಂದು ಸೋಮವಾರದವರೆಗೆ ಕಾಯುತ್ತೇವೆ. ನಂತರ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ.
-ಹಂದ್ರಾಳ್ ನಾಗಭೂಷಣ್, ಸಾಮಾಜಿಕ ಹೋರಾಟಗಾರರು