ಬೆಂಗಳೂರು, ಜೂ. ೧೦- ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್ ಸಿದ್ದರಾಮಯ್ಯ ಎಂಬುದು ರಾಜ್ಯಸಭಾ ಚುನಾವಣೆಯಿಂದ ಜಗಜ್ಜಾಹೀರಾಗಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇನ್ನು ಮುಂದೆ ಕಾಂಗ್ರೆಸ್ ಜತೆ ಯಾವತ್ತೂ ಮೈತ್ರಿ ಇಲ್ಲ. ಡೋರ್ ಕ್ಲೋಸ್ ಎಂದಿದ್ದಾರೆ.ರಾಜ್ಯಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂಬ ಮನವಿಗೆ ಕಾಂಗ್ರೆಸ್ ಸ್ಪಂದಿಸಿಲ್ಲ.
ಈ ಚುನಾವಣೆಯ ಮೂಲಕ ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್ ಸಿದ್ದರಾಮಯ್ಯ ಎನ್ನುವುದು ಜಗಜ್ಜಾಹೀರಾಗಿದೆ ಎಂದರು.ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜೆಡಿಎಸ್‌ಗೆ ೨ನೇ ಪ್ರಾಶಸ್ತ್ಯ ಮತ ನೀಡಿದ್ದರೂ ಸಾಕಾಗಿತ್ತು. ಆದರೆ ಅವರು ಬಿಜೆಪಿಯನ್ನು ಗೆಲ್ಲಿಸಲು ನಮಗೆ ಬೆಂಬಲ ನೀಡಿಲ್ಲ. ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿಗೆ ಹೋಗಲ್ಲ. ಮೈತ್ರಿ ಎಂಬುದು ಮುಗಿದ ಅಧ್ಯಾಯ. ನಾಳೆಯಿಂದ ರಾಜ್ಯದಲ್ಲಿ ಹೊಸ ಇತಿಹಾಸ ಆರಂಭವಾಗಲಿದೆ ಎಂದರು.ಜೆಡಿಎಸ್‌ನ ೩೨ ಶಾಸಕರ ಪೈಕಿ ೩೧ ಶಾಸಕರು ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿಯವರಿಗೆ ಮತ ಹಾಕುತ್ತಾರೆ. ರಮೇಶ್‌ಕುಮಾರ್ ಮತ್ತು ಸಿದ್ದರಾಮಯ್ಯ ಸೇರಿ ಶ್ರೀನಿವಾಸಗೌಡ ಅವರನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವೊಲಿಸಿದ್ದಾರೆ. ಅವರು ಸಹ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಹಾಗಾಗಿ ಒಂದು ಮತ ಅಡ್ಡಮತದಾನವಾಗಬಹುದು ಎಂದರು.
ಕಾಂಗ್ರೆಸ್ ಪಕ್ಷದವರಿಗೆ ಶ್ರೀನಿವಾಸಗೌಡರಿಂದ ಮತ ಹಾಕಿಸಿಕೊಂಡರೆ ಏನು ಪ್ರಯೋಜನ. ಅವರ ಎರಡನೇ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುತ್ತಾರಾ. ಬಿಜೆಪಿಗೆ ನೆರವಾಗಲು ಇವೆಲ್ಲಾ ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಈಶ್ವರಪ್ಪ ಸಿದ್ದರಾಮಯ್ಯನವರ ನೆರವಿನಿಂದ ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಈಗಾಗಲೇ ಹೇಳಿದ್ದಾರೆ. ಹಾಗೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹ ಕಾಂಗ್ರೆಸ್ ಶಾಸಕಾಂಗ ಕಚೇರಿಗೆ ತೆರಳಿ ಸಿದ್ದರಾಮಯ್ಯನವರನ್ನು ಅಭಿನಂದಿಸಿದ್ದಾರೆ. ಇವೆಲ್ಲ ಸಿದ್ದರಾಮಯ್ಯ ಬಿಜೆಪಿಯ ಬಿ ಟೀಮ್ ಎನ್ನುವುದನ್ನು ಜಗಜ್ಜಾಹೀರಾತು ಮಾಡಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಈ ಹಿಂದೆ ಜೆಡಿಎಸ್ ರಾಜ್ಯಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾಗ ಸಿದ್ದರಾಮಯ್ಯನವರು ಜೆಡಿಎಸ್‌ನ ೮ ಶಾಸಕರ ಅಡ್ಡಮತದಾನ ಮಾಡಿಸಿ ಅಲ್ಪಸಂಖ್ಯಾತರ ಅಭ್ಯರ್ಥಿಯನ್ನು ಸೋಲಿಸಿದ್ದರು. ಇವರಿಗೆ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ನೈತಿಕತೆ ಇದೆಯೇ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡ ಅವರು ಅಡ್ಡಮತದಾನ ಮಾಡಿದರೆ ಅವರ ವಿರುದ್ಧ ಅನರ್ಹತೆ ಅಸ್ತ್ರ ಬಳಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಹಿಂದೆ ಜೆಡಿಎಸ್‌ನ ೮ ಶಾಸಕರು ಅಡ್ಡಮತದಾನ ಮಾಡಿದ್ದರು. ಅವರ ವಿರುದ್ಧ ಏನು ಕ್ರಮ ಆಗಲಿಲ್ಲ. ಪಕ್ಷಾಂತರ ಕಾಯ್ದೆ ಕಾನೂನಿಗಷ್ಟೆ ಇದೆ. ಕ್ರಮ ಜರುಗಿಸಲು ಆಗಲ್ಲ. ಆದರೆ ಜನ ಶ್ರೀನಿವಾಸಗೌಡರವರಿಗೆ ಪಾಠ ಕಲಿಸುತ್ತಾರೆ. ಹಿಂದೆ ಅಡ್ಡಮತದಾನ ಮಾಡಿದ್ದ ಶಾಸಕರಿಗೆ ಜನ ಪಾಠ ಕಲಿಸಿದ್ದಾರೆ ಎಂದರು.ಜೆಡಿಎಸ್ ಪಕ್ಷ ಏನೇ ಆದರೂ ಇಂತಹದ್ದಕ್ಕೆಲ್ಲ ಹೆದರುವುದಿಲ್ಲ. ಮತ್ತೆ ಪುಟಿದೇಳುತ್ತದೆ. ನಾಳೆಯಿಂದ ಹೊಸ ಅಧ್ಯಾಯ ಆರಂಭವಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಅಸ್ಮಿತೆಯ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ತಮ್ಮ ಗುರಿ ಎಂದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


