ಶಿಗ್ಗಾಂವಿ: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದು ನುಡಿದಂತೆ ನಡೆದ ಕಾಂಗ್ರೆಸ್ ಮತ್ತು ಮಾತಿಗೆ ತಪ್ಪಿದ ಬಿಜೆಪಿ ನಡುವಿನ ಚುನಾವಣೆ. ಈ ಚುನಾವಣೆಯಲ್ಲಿ ಜನರ ಮತಕ್ಕೆ ಗೌರವ ಕೊಟ್ಟ ನಾವು ಗೆಲ್ಲಬೇಕು, ನಿಮ್ಮ ನಂಬಿಕೆಗೆ ದ್ರೋಹ ಬಗೆದ ಬಿಜೆಪಿ ಸೋಲಬೇಕು ಎಂದರು.
ರಾಜ್ಯದಲ್ಲಿ ಇವತ್ತಿನವರೆಗೂ ಬಿಜೆಪಿ ಬಹುಮತ ಪಡೆದು ಅಧಿಕಾರ ನಡೆಸಿಲ್ಲ. ಒಂದು ಬಾರಿಯೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲದ್ದರಿಂದ ಮೂರು ಬಾರಿಯೂ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರ ನಡೆಸಿದರು. ಆಪರೇಷನ್ ಕಮಲಕ್ಕೆ ಹಾಕಿದ ಹಣ ರಿಕವರಿ ಮಾಡಲು ಭ್ರಷ್ಟಾಚಾರ ಮಾಡಿದರು ಎಂದು ಆರೋಪಿಸಿದರು.
ಬಿಜೆಪಿ ಚುನಾವಣೆ ವೇಳೆ ಕೊಟ್ಟ ಭರವಸೆಗಳಲ್ಲಿ ಶೇ.10 ರಷ್ಟೂ ಈಡೇರಿದಿಲ್ಲ. ನಾವು ಕೊಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಬಗ್ಗೆ ನಾವು ಯಾವುದೇ ವೇದಿಕೆಯಲ್ಲಿ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧ. ಈಗ ನಮ್ಮ ಸರ್ಕಾರ 136 ಸೀಟುಗಳನ್ನು ಗೆದ್ದು ಅಧಿಕಾರದಲ್ಲಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಈ ಕ್ಷೇತ್ರಗಳ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದರು.
ಬೊಮ್ಮಾಯಿ ಎಂಥಾ ಮನುಷ್ಯ ಅಂದ್ರೆ, ಲೋಕಸಭಾ ಚುನಾವಣೆಗೆ ನಾನು ಮಾತ್ರ ನಿಲ್ಲಲ್ಲ. ನನಗೆ ಟಿಕೇಟ್ ಬೇಕಾಗಿಲ್ಲ ಅಂತ ಹೇಳ್ತಾ ಹೇಳ್ತಾ ಅವರೇ ಟಿಕೆಟ್ ತಗೊಂಡು ಚುನಾವಣೆಗೆ ಸ್ಪರ್ಧಿಸಿದರು. ಈಗ ಉಪ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಲ್ಲ, ನನ್ನ ಮಗನಿಗೆ ಟಿಕೇಟ್ ಕೇಳಲ್ಲಾ, ಕೇಳಲ್ಲಾ ಅನ್ನುತ್ತಲೇ ಭರತ್‌ಗೇ ಟಿಕೆಟ್ ತಂದರು. ಇದು ಬೊಮ್ಮಾಯಿ ಅವರ ಸ್ವಭಾವ ಎಂದರು.
ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣ ಬಗ್ಗೆ ಉದ್ದುದ್ದ ಭಾಷಣ ಬಾರಿಸ್ತಾರೆ. ಆದರೆ, ಇಲ್ಲಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಹಾಗೆಯೇ ಕುಟುಂಬ ರಾಜಕಾರಣವನ್ನು ಬಿಟ್ಟು ಬೇರೇನೂ ಮಾಡದ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರನ್ನು ಅಪ್ಪಿಕೊಂಡಿದ್ದಾರೆ ಎಂದರು.
ನನ್ನ ಮತ್ತು ನನ್ನ ಪತ್ನಿ ವಿರುದ್ಧ ಷಡ್ಯಂತ್ರ ನಡೆಸಿ ಸುಳ್ಳು ಕೇಸು ಹಾಕಿಸಿದ್ದಾರೆ. ನಾಳೆ ಲೋಕಾಯುಕ್ತ ಪೊಲೀಸರ ಎದುರು ಸುಳ್ಳು ಕೇಸಿನ ಬಗ್ಗೆ ಹೇಳಿಕೆ ಕೊಡಬೇಕಾಗಿದೆ.
ಇದಕ್ಕೆಲ್ಲಾ ಉತ್ತರ ಕೊಡಬೇಕು ಅಂದರೆ ಉಪ ಚುನಾವಣೆಯಲ್ಲಿ ಪಠಾಣ್ ಗೆಲ್ಲಿಸಿ. ಇಲ್ಲಿ ಪಠಾಣ್ ಗೆದ್ದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿಯ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q