ತುಮಕೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ನೂತನ ಜ್ಞಾನಸಿರಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಬಹುಪಯೋಗಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ‘ಯುವಜನ ಹಾಗೂ ಸಹಕಾರ’ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿದರಕಟ್ಟೆಯ ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಅನೇಕ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುತ್ತಿದೆ. ಬಹುಪಯೋಗಿ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ರಾಜ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದರು.
ಎಲ್ಲಾ ಕಾರ್ಯಗಳನ್ನು ಸರ್ಕಾರ ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ಸರ್ಕಾರೇತರ ಸಂಸ್ಥೆಗಳು ಜನೋಪಯೋಗಿ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅಧ್ಯಯನದ ಹಂತದಲ್ಲೇ ಸಹಕಾರಿ ಚಳುವಳಿ ಬಗ್ಗೆ ತಿಳಿದುಕೊಂಡು ಅದನ್ನು ಬಲಪಡಿಸಲು ಶ್ರಮಿಸಬೇಕು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ ಮಾತನಾಡಿ, ಸಹಕಾರಿ ಸಂಘಗಳಿಗೆ ಯುವಜನತೆಯ ಬೆಂಬಲ ಬೇಕು. ಎಲ್ಲಾ ಕಾಲೇಜುಗಳ ಆವರಣದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಪ್ರಯತ್ನ ಮಾಡಬೇಕು ಎಂದರು.
ಇಲ್ಲಿಯವರೆಗೂ 37 ಸಾವಿರ ಕೋಟಿ ರೂ. ಸಾಲವನ್ನು ಸಹಕಾರ ಸಂಸ್ಥೆಗಳು ನೀಡಿವೆ. ಸಮಾಜವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಮುಖ್ಯ ಗುರಿ ಎಂದರು.
ಗ್ರಾಮೀಣ ವಿದ್ಯಾರ್ಥಿನಿ ಒಬ್ಬರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದು ಸಾಧನೆಯ ವಿಚಾರ. ಸಹಕಾರಿ ಸಂಸ್ಥೆಗಳಲ್ಲಿ ಅನೇಕ ಉದ್ಯೋಗಾವಕಾಶಗಳಿದ್ದು ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಸಿ.ಪಿ. ವಿಜಯ ಮಾತನಾಡಿ ಅಮುಲ್, ನಂದಿನಿ, ಡಿಸಿಸಿ ಬ್ಯಾಂಕ್ ಇಂತಹ ಹಲವಾರು ಸಹಕಾರಿ ಸಂಸ್ಥೆಗಳು ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿವೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ರಾಷ್ಟ್ರೀಯ ಸಹಕಾರಿ ಯೂನಿಯನ್ ವಿಶ್ರಾಂತ ನಿರ್ದೇಶಕ ಡಾ.ಎ.ಆರ್. ಶ್ರೀನಾಥ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4