ಕಳೆದ ಒಂದು ವರ್ಷದಿಂದ ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ಎರಡು ದಿನಗಳಿಂದ ಏರಿಕೆ ಗತಿಯಲ್ಲಿದ್ದು ದೈನಂದಿನ ಸೋಂಕು 3,962ರಷ್ಟಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕು ಹೆಚ್ಚಿರುವ ಐದು ರಾಜ್ಯಗಳಿಗೆ ಪತ್ರ ಬರೆದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಆತಂಕಕಾರಿ ಬೆಳವಣಿಗೆಯಲ್ಲಿ ಇಂದು ಸೋಂಕಿನಿಂದ ಸಾವಿನ ಸಂಖ್ಯೆ 26ರಷ್ಟಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,24,677ರಷ್ಟಾಗಿದ್ದು, ಶೇಕಡವಾರು 1.22ರ ಮಿತಿಯಲ್ಲಿದೆ.ನಿನ್ನೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಬುಲೇಟಿನನಲ್ಲಿ ದೈನಂದಿನ ಸೋಂಕು 4041ರಷ್ಟಿದ್ದು, ಸಾವಿನ ಸಂಖ್ಯೆ 10 ಎಂದು ನಮೂದಿಸಲಾಗಿತ್ತು.
84 ದಿನಗಳ ಬಳಿಕ ದೈನಂದಿನ ಸೋಂಕು ನಾಲ್ಕು ಸಾವಿರ ಗಡಿ ದಾಟಿತ್ತು. ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ವರದಿಯಲ್ಲಿ ದೈನಂದಿನ ಸೋಂಕು ನಾಲ್ಕು ಸಾವಿರದ ಗಡಿಯ ಸಮೀಪದಲ್ಲಿದೆ. ನಿನ್ನೆಗಿಂತಲೂ ಕಡಿಮೆ ಇದೆ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.
ಈ ಮೊದಲು ಎರಡನೆ ಮತ್ತು ಮೂರನೇ ಅಲೆಯ ಮುನ್ಸೂಚನೆಯನ್ನು ಕರಾರುವಕ್ಕಾಗಿ ನೀಡಿದ್ದ ಕಾನ್ಪುರ ಐಐಟಿ ಸಂಸ್ಥೆ, ನಾಲ್ಕನೇ ಅಲೆ ಜೂನ್‍ನಲ್ಲಿ ಎದುರಾಗುವ ಕುರಿತು ಸುಳಿವು ನೀಡಿತ್ತು. ಅದಕ್ಕೆ ತಕ್ಕ ಹಾಗೆ ದೇಶಾದ್ಯಂತ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ನಿನ್ನೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಕೋವಿಡ್ ಮುನ್ನೆಚ್ಚಾರಿಕಾ ಕ್ರಮಗಳನ್ನು ಮರು ಜಾರಿ ಮಾಡುವ ಕುರಿತು ಸಿದ್ಧತೆ ಕೈಗೊಳ್ಳುವಂತೆ ಹಾಗೂ ಮಾದರಿ ಸಂಗ್ರಹಗಳನ್ನು ಜಿನೋಮೆ ಸಿಕ್ವೇನ್ಸ್ ಪರೀಕ್ಷೆಗೆ ಒಳಪಡಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಸಲಹೆ ನೀಡಿದೆ.
ದೇಶದಲ್ಲಿ ಒಟ್ಟು ಸೋಂಕಿನ ಪ್ರಮಾಣ 4,31,72,547ರಷ್ಟಾಗಿದೆ. ಸಕ್ರಿಯ ಪ್ರಕರಣಗಳು 24 ಗಂಟೆಗಳ ಅವಯಲ್ಲಿ 1239ರಷ್ಟು ಹೆಚ್ಚಾಗಿದ್ದು, ಒಟ್ಟು ಪ್ರಕರಣಗಳು 22,416ರಷ್ಟಾಗಿದೆ. ಆದಾಗ್ಯೂ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.05ರ ಒಳಗೆ ಮಿತಿಯಲ್ಲಿರುವುದರಿಂದ ವೈದ್ಯಕೀಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬಿದ್ದಿಲ್ಲ ಎಂದು ಹೇಳಲಾಗಿದೆ.
ಸಾವಿನ ಪ್ರಕರಣಗಳಲ್ಲಿ 20 ಕೇರಳದಲ್ಲೇ ವರದಿಯಾಗಿವೆ. ದೈನಂದಿನ ಸೋಂಕಿನ ಪ್ರಮಾಣ ಶೇ.0.89ರಷ್ಟಿದ್ದರೆ, ವಾರದ ಸೋಂಕಿನ ಪ್ರಮಾಣ ಶೇ.0.77ರಷ್ಟಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


