ಬೆಂಗಳೂರು: ಪುರಾತನವಾದ ಜೈನ ಧರ್ಮ ರಾಷ್ಟ್ರದ ಅಲ್ಪಸಂಖ್ಯಾತ ಧರ್ಮವಾಗಿದ್ದು ರಾಜ್ಯ ಸರ್ಕಾರ ಸರಿಯಾದ ಸವಲತ್ತುಗಳನ್ನು ನೀಡದೆ ಜೈನ ಧರ್ಮವನ್ನು ವಂಚಿಸುತ್ತಿದೆ. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಸುಮಾರು ವಾರ್ಷಿಕವಾಗಿ 200 ಕೋಟಿ ರೂ.ಗಳನ್ನು ಮೀಸಲಿಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀ ದಿಗಂಬರ್ ಜೈನ ಗ್ಲೋಬಲ್ ಮಹಾಸಭಾ ಅಧ್ಯಕ್ಷ ಮಹೇಶ್ ಜೈನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿವರ್ಷ ಜೈನ ಧರ್ಮದ ಅಲ್ಪಸಂಖ್ಯಾತರಿಗೆ 200 ಕೋಟಿ ರೂಗಳನ್ನು ಮೀಸಲಿಡಬೇಕು, ಸರ್ಕಾರ ರಾಜ್ಯದಲ್ಲಿರುವ 414 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಎರಡು ವಿದ್ಯಾರ್ಥಿ ನಿಲಯಗಳು ಜೈನ ಸಮುದಾಯಕ್ಕೆ ಮೀಸಲಿಡಬೇಕು, ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ ಶೇಕಡ 50ರಷ್ಟು ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು ಎಂದರು.
ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಜೈನ ಸಮದಾಯಕ್ಕೆ ಸಿಕ್ಕಿಲ್ಲ ಈವರೆಗೆ ನಿಗಮದಲ್ಲಿ ಜೈನ ನಿರ್ದೇಶಕರು ಆಯ್ಕೆಯಾಗಿಲ್ಲ, ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ನೀಡಬೇಕು ಹಾಗೂ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಬೇಕು, ನಿಗಮದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತ ಜನಾಂಗಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು ಎಂದರು.
ಈವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹಾಗೂ ಆಯೋಗದಲ್ಲಿ ಅಲ್ಪಸಂಖ್ಯಾತ ಸದಸ್ಯರ ಆಯ್ಕೆ ಆಗಿಲ್ಲ. ಆಯೋಗಕ್ಕೆ ಜೈನ ಸದಸ್ಯರ ನೇಮಕ ಹಾಗೂ ಆಯೋಗದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು, ಜೈನ ಸಮಾಜಕ್ಕೆ ಅಲ್ಪಸಂಖ್ಯಾತರ ವಿಭಾಗದಲ್ಲಿ ಶೇಕಡ 5 ರಷ್ಟು ಮೀಸಲಾತಿ ಇದ್ದು, ಇದನ್ನು ಶೇಕಡ 20ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರಾಚೀನ ಜೈನ ಬಸದಿಗಳು ಹಾಗೂ ಅದರ ಆಸ್ತಿ ಸಂರಕ್ಷಣೆಗೆ ಕಠೋರ ಕಾನೂನು ಜಾರಿಗೆ ತರಬೇಕು. ಎಲ್ಲಾ ಪ್ರಾಚೀನ ಬಸದಿಗಳು ಹಾಗೂ ಆಸ್ತಿಗಳನ್ನು ಸರ್ವೆ ಮಾಡಿ ಅತಿಕ್ರಮಣ ತೆರವಿಗೆ ಹಾಗೂ ಬಸದಿಗಳು ಮತ್ತು ಆಸ್ತಿಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಕಾನೂನು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರ ಮುಸ್ಲಿಂ ಹಾಗೂ ಕ್ರಿಶ್ಚಿಯರನ್ನ ಮಾತ್ರ ಅಲ್ಪಸಂಖ್ಯಾತರ ಧರ್ಮದವರು, ಅಲ್ಪಸಂಖ್ಯಾತರ ವಿಭಾಗಕ್ಕೆ ಈ ಎರಡು ವರ್ಗಗಳು ಮಾತ್ರ ಸೀಮಿತವಾಗಿವೆ ಎಂದು ಜೈನರನ್ನು ಮೂಲೆ ಗುಂಪು ಮಾಡುತ್ತಾ ತಾರತಮ್ಯ ಮಾಡುತ್ತಿದೆ ಎಂದರು.
ಅಲ್ಪಸಂಖ್ಯಾತ ವಿಭಾಗದ ಸಚಿವ ಪದವಿ, ಅಲ್ಪಸಂಖ್ಯಾತರ ಆಯೋಗಗಳ ಎಲ್ಲಾ ಮಹತ್ವದ ಹುದ್ದೆಗಳು, ಪದವಿಗಳು ಕೇವಲ ಮುಸ್ಲಿಮರಿಗೆ ಸರ್ಕಾರ ನೀಡುತ್ತಿದೆ ,ಎಲ್ಲಾ ಅಲ್ಪಸಂಖ್ಯಾತರ ಕಚೇರಿಯಲ್ಲಿ ಅವರದ್ದೇ ಮುಸ್ಲಿಂ ಜನರು ಇದ್ದಾರೆ. ಅಲ್ಪಸಂಖ್ಯಾತರ ನಿಗಮದಲ್ಲಿ 6 ಜನ ಮುಸ್ಲಿಮರು 1 ಕ್ರಿಶ್ಚಿಯನ್ ರನ್ನ ಆಯ್ಕೆ ಮಾಡಿಕೊಂಡಿದ್ದಾರೆ, ಆದರೆ ಜೈನರಿಗೆ ಯಾವುದೇ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ಆಯೋಗದಲ್ಲಿ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ವಿಭಾಗದ ಯೋಜನೆ ಗಳಲ್ಲಿ ಶೇಕಡ 5. ರಷ್ಟುಮೀಸಲಾತಿ ಮಾತ್ರ ನೀಡಿದ್ದಾರೆ ಎಂದರು.
ಎಲ್ಲಾ ಯೋಜನೆಗಳಲ್ಲೂ ಒಂದೇ ಸಮುದಾಯದ ಫಲಾನುಭವಿಗಳು ಇದ್ದಾರೆ ,ಕ್ರಿಶ್ಚಿಯನ್ ಅಭಿವೃದ್ಧಿಗೆ ಸರ್ಕಾರ ಪ್ರತಿ ವರ್ಷ 200 ಕೋಟಿ ರೂ. ಗಳನ್ನ ಸರ್ಕಾರ ಕೊಡುತ್ತಿದೆ ಆದರೆ ಸರ್ಕಾರ ಜೈನರ ಬೇಡಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ,ಈ ಬೇಡಿಕೆಗಳನ್ನ ಈಡೇರಿಕೆಗೆ ಸರ್ಕಾರ ಒಂದು ತಿಂಗಳ ಗಡುವು ನೀಡುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಬೇಡಿಕೆಗಳನ್ನ ಈಡೇರಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಅಥವಾ ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ವಿಭಾಗದ ದಿಗಂಬರ ಜೈನ್ ಗ್ಲೋಬಲ್ ಮಹಾಸಭಾ ಸದಸ್ಯರಾದ ಡಾ.ರೇಣುಕಾ ರಾಂಕ್ ಜೈನ್, ವಸಂತಿ ಚೋಪ್ರಾ ಜೈನ್ , ಸತೀಶ್ ಜೈನ್, ಮಿಥುನ್ ಜೈನ್, ಸಾಮಾಜಿಕ ಹೋರಾಟಗಾರ ಪಚ್ಚೆಶ್ ಜೈನ್ ಮಾತನಾಡಿದರು. ಮಾಳ ಹರ್ಷೇಂದ್ರ ಜೈನ್ ಉಪಸ್ಥಿತರಿದ್ದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q