ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಕಲರ್ಸ್ ಕನ್ನಡ ವಾಹಿನಿ ಸುವರ್ಣಾವಕಾಶ ನೀಡಿದೆ. ಈಗಾಗಲೇ ಸಾವಿರಾರು ಆಕಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷಿಸಲು ಆಡಿಷನ್ ವಿಡಿಯೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ, ನೀವು ಮಾಡುವ ಒಂದು ಸಣ್ಣ ತಪ್ಪು ನಿಮ್ಮ ಬಿಗ್ ಬಾಸ್ ಕನಸನ್ನು ಭಂಗಗೊಳಿಸಬಹುದು!
ನಿಮ್ಮ ಆಡಿಷನ್ ವಿಡಿಯೋ ತಿರಸ್ಕೃತ (Reject) ಆಗಬಾರದು ಎಂದರೆ ವಿಡಿಯೋ ಮಾಡುವಾಗ ಈ ಕೆಳಗಿನ ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.
3 ನಿಮಿಷಗಳ ನಿಖರ ವಿಡಿಯೋ ಇರಲಿ:
ವಾಹಿನಿ ನೀಡಿರುವ ಅಧಿಕೃತ ನಿಯಮದ ಪ್ರಕಾರ, ನಿಮ್ಮ ಆಡಿಷನ್ ವಿಡಿಯೋ ಕಡ್ಡಾಯವಾಗಿ 3 ನಿಮಿಷಗಳ ಕಾಲಾವಧಿಯದ್ದೇ ಆಗಿರಬೇಕು. ಅದಕ್ಕಿಂತ ತೀರಾ ಕಡಿಮೆ ಅಥವಾ ಅತಿ ಉದ್ದದ ವಿಡಿಯೋಗಳನ್ನು ಮಾಡಿದರೆ ಅವುಗಳನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಿಗದಿತ ಸಮಯದೊಳಗೇ ನಿಮ್ಮ ವಿವರಣೆಯನ್ನು ಅಚ್ಚುಕಟ್ಟಾಗಿ ನೀಡಬೇಕು.
ಸ್ಪಷ್ಟವಾದ ವಿವರಣೆ ಅತ್ಯಗತ್ಯ:
ವಿಡಿಯೋದಲ್ಲಿ ಕೇವಲ ನಿಮ್ಮ ಹೆಸರು, ಊರು ಹೇಳುವುದಷ್ಟೇ ಅಲ್ಲದೆ, ‘ನೀವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಅರ್ಹರು?’ ಮತ್ತು ‘ನಿಮ್ಮ ವ್ಯಕ್ತಿತ್ವದ ವಿಶೇಷತೆ ಏನು?’ ಎಂಬುದನ್ನು ನಿಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟವಾಗಿ ವಿವರಿಸಬೇಕು. ನಿಮ್ಮ ಮುಗ್ಧತೆ, ಧೈರ್ಯ ಅಥವಾ ಯಾವುದೇ ವಿಭಿನ್ನ ಪ್ರತಿಭೆ ಇದ್ದರೆ ಅದನ್ನು ಮುಕ್ತವಾಗಿ ಹಂಚಿಕೊಳ್ಳಿ.
ವೀಡಿಯೊ ಕ್ವಾಲಿಟಿ ಮತ್ತು ಹಿನ್ನೆಲೆ:
ಅನೇಕರು ಆತುರದಲ್ಲಿ ಕತ್ತಲಿರುವ ಜಾಗದಲ್ಲಿ ಅಥವಾ ಅತಿ ಹೆಚ್ಚು ಗಲಾಟೆ (ಶಬ್ದ) ಇರುವಲ್ಲಿ ವಿಡಿಯೋ ಮಾಡುತ್ತಾರೆ. ಇಂತಹ ತಪ್ಪು ಮಾಡಬೇಡಿ. ನಿಮ್ಮ ಮುಖ ಮತ್ತು ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಉತ್ತಮ ಬೆಳಕಿರುವ ಹಾಗೂ ಶಾಂತವಾಗಿರುವ ಜಾಗದಲ್ಲಿ ವಿಡಿಯೋ ರೆಕಾರ್ಡ್ ಮಾಡಿ.
ವಿಡಿಯೋ ಅಪ್ ಲೋಡ್ ಮಾಡುವುದು ಹೇಗೆ?
ನಿಮ್ಮ 3 ನಿಮಿಷದ ಪರಿಪೂರ್ಣ ವಿಡಿಯೋ ಸಿದ್ಧವಾದ ಬಳಿಕ, ಅದನ್ನು ವಾಹಿನಿಯ ಅಧಿಕೃತ ವೆಬ್‌ಸೈಟ್ ಆದ colorskannada.jiostar.com ಗೆ ಭೇಟಿ ನೀಡಿ ಅಪ್ ಲೋಡ್ ಮಾಡಬೇಕಾಗುತ್ತದೆ. ಕೆಲವರು ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಕಲರ್ಸ್ ಕನ್ನಡ ವಾಹಿನಿಗೆ ಟ್ಯಾಗ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ವಾಹಿನಿ ಸ್ಪಷ್ಟಪಡಿಸಿದೆ. ಹಾಗಾಗಿ ಸರಿಯಾಗಿ ವಿಡಿಯೋ ಮಾಡಿ, ಅಪ್ ಲೋಡ್ ಮಾಡಿ, ನಿಮ್ಮ ಬಿಗ್ ಬಾಸ್ ಕನಸನ್ನು ನನಸಾಗಿಸಿಕೊಳ್ಳಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


