ದೂರದ ಪ್ರಯಾಣದ ವೇಳೆ ಮೊಬೈಲ್ ಬ್ಯಾಟರಿ ಖಾಲಿಯಾಗುವುದು ಅನೇಕರಿಗೆ ಎದುರಾಗುವ ಸಾಮಾನ್ಯ ಸಮಸ್ಯೆ. ಅದರಲ್ಲೂ ಚಾರ್ಜಿಂಗ್ ಸೌಲಭ್ಯ ಸುಲಭವಾಗಿ ಲಭ್ಯವಿಲ್ಲದ ಸಂದರ್ಭದಲ್ಲಿ ಫೋನ್ ಸ್ವಿಚ್ ಆಫ್ ಆಗುವ ಪರಿಸ್ಥಿತಿ ಎದುರಾಗಬಹುದು. ಪ್ರಯಾಣಕ್ಕೂ ಮುನ್ನ ಮೊಬೈಲ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡಿದ್ದರೂ, ಸಿನಿಮಾ ನೋಡುವುದು, ಹಾಡು ಕೇಳುವುದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಹಾಗೂ ನಿರಂತರ ಕರೆಗಳಿಂದ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಖಾಲಿಯಾಗುತ್ತದೆ.
ಫೋನ್ ಬಳಕೆಯ ಜೊತೆಗೆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಆಯಪ್ಗಳು, ನೆಟ್ವರ್ಕ್ ಹುಡುಕಾಟ, ಸ್ಕ್ರೀನ್ ಬ್ರೈಟ್ನೆಸ್ ಸೇರಿದಂತೆ ಹಲವು ಅಂಶಗಳು ಬ್ಯಾಟರಿ ಬೇಗ ಖಾಲಿಯಾಗಲು ಕಾರಣವಾಗುತ್ತವೆ. ಆದರೆ ಕೆಲವು ಸರಳ ತಂತ್ರಗಳನ್ನು ಅನುಸರಿಸಿದರೆ ಪ್ರಯಾಣದ ಸಮಯದಲ್ಲಿ ಮೊಬೈಲ್ ಬ್ಯಾಟರಿಯನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಬಹುದು.
ಬ್ಯಾಟರಿ ಸೇವರ್ ಮೋಡ್ ಆನ್ ಮಾಡಿಕೊಳ್ಳಿ
ಮೊಬೈಲ್ ಚಾರ್ಜ್ ಹೆಚ್ಚು ಸಮಯ ಬರುವಂತೆ ಮಾಡಲು ಬ್ಯಾಟರಿ ಸೇವರ್ ಮೋಡ್ ಬಳಸುವುದು ಉತ್ತಮ. ಆಂಡ್ರಾಯ್ಡ್ ಫೋನ್ಗಳಲ್ಲಿ ಬ್ಯಾಟರಿ ಸೆಟ್ಟಿಂಗ್ಸ್ಗೆ ತೆರಳಿ ‘ಬ್ಯಾಟರಿ ಸೇವರ್’ ಆಯ್ಕೆಯನ್ನು ಸಕ್ರಿಯಗೊಳಿಸಬಹುದು. ಐಫೋನ್ಗಳಲ್ಲಿ ‘ಲೋ ಪವರ್ ಮೋಡ್’ ಆನ್ ಮಾಡುವುದರಿಂದ ಹಿನ್ನೆಲೆಯಲ್ಲಿ ನಡೆಯುವ ಚಟುವಟಿಕೆಗಳು, ಸ್ವಯಂಚಾಲಿತ ಸಿಂಕಿಂಗ್ ಮತ್ತು ಕೆಲವು ದೃಶ್ಯ ಪರಿಣಾಮಗಳು ಮಿತಿಗೊಳ್ಳುತ್ತವೆ. ಇದರಿಂದ ಬ್ಯಾಟರಿ ಬಳಕೆ ಕಡಿಮೆಯಾಗುತ್ತದೆ.ಇದರ ಜೊತೆಗೆ, ನಿಮ್ಮ ಫೋನ್ನಲ್ಲಿ 5G ನೆಟ್ವರ್ಕ್ ಬಳಸುವ ಅಗತ್ಯವಿಲ್ಲದಿದ್ದರೆ 4G ಅಥವಾ LTE ಆಯ್ಕೆಗೆ ಬದಲಾಯಿಸಬಹುದು. ಮೊಬೈಲ್ ಸ್ಕ್ರೀನ್ ಬ್ರೈಟ್ ನೆಸ್ ಅನ್ನು ಕಡಿಮೆ ಇಡುವುದರಿಂದಲೂ ಬ್ಯಾಟರಿ ಉಳಿತಾಯವಾಗುತ್ತದೆ. ಆಟೋ ಬ್ರೈಟ್ನೆಸ್ ಆಯ್ಕೆಯನ್ನು ಬಳಸಿದರೆ ಸುತ್ತಮುತ್ತಲಿನ ಬೆಳಕಿಗೆ ಅನುಗುಣವಾಗಿ ಸ್ಕ್ರೀನ್ ಹೊಳಪು ಸ್ವಯಂಚಾಲಿತವಾಗಿ ಹೊಂದಾಣಿಕೆಯಾಗುತ್ತದೆ.
ಕೆಲವು ಸ್ಮಾರ್ಟ್ಫೋನ್ಗಳಲ್ಲಿ 90Hz ಅಥವಾ 120Hz ರಿಫ್ರೆಶ್ ರೇಟ್ ಸೌಲಭ್ಯವಿರುತ್ತದೆ. ಬ್ಯಾಟರಿ ಉಳಿಸುವ ಉದ್ದೇಶದಿಂದ ಇದನ್ನು 60Hz ಗೆ ಬದಲಾಯಿಸಬಹುದು. ಹಾಗೆಯೇ, ಸ್ಕ್ರೀನ್ ಟೈಮ್ಔಟ್ ಅನ್ನು 15 ಅಥವಾ 30 ಸೆಕೆಂಡುಗಳಿಗೆ ನಿಗದಿಪಡಿಸುವುದು ಉತ್ತಮ.
ಅನಗತ್ಯ ಆ್ಯಪ್ ಗಳ ಬಳಕೆಗೆ ಕಡಿವಾಣ ಹಾಕಿ
ಸ್ಮಾರ್ಟ್ಫೋನ್ ನಲ್ಲಿ ಹಲವು ಆಯಪ್ಗಳು ಬಳಕೆದಾರರಿಗೆ ತಿಳಿಯದಂತೆಯೇ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಇವು ಬ್ಯಾಟರಿಯನ್ನು ಹೆಚ್ಚು ಬಳಸಬಹುದು. ಹೀಗಾಗಿ ಫೋನ್ ಸೆಟ್ಟಿಂಗ್ಸ್ನಲ್ಲಿರುವ ಬ್ಯಾಟರಿ ಬಳಕೆಯ ವಿವರಗಳನ್ನು ಪರಿಶೀಲಿಸಿ, ಹೆಚ್ಚು ಚಾರ್ಜ್ ಬಳಸುವ ಅನಗತ್ಯ ಆಯಪ್ಗಳ ಹಿನ್ನೆಲೆ ಚಟುವಟಿಕೆಯನ್ನು ನಿರ್ಬಂಧಿಸಿ.
ಅಗತ್ಯವಿಲ್ಲದ ಸಮಯದಲ್ಲಿ ಜಿಪಿಎಸ್, ಹಾಟ್ಸ್ಪಾಟ್ ಮತ್ತು ಬ್ಲೂಟೂತ್ ಸೌಲಭ್ಯಗಳನ್ನು ಆಫ್ ಮಾಡಿಡಿ. ವಿಶೇಷವಾಗಿ ನೆಟ್ವರ್ಕ್ ಸಿಗ್ನಲ್ ಸರಿಯಾಗಿ ಸಿಗದ ಪ್ರದೇಶಗಳಲ್ಲಿ ಮೊಬೈಲ್ ನಿರಂತರವಾಗಿ ಸಿಗ್ನಲ್ ಹುಡುಕುವುದರಿಂದ ಬ್ಯಾಟರಿ ಬೇಗ ಖಾಲಿಯಾಗಬಹುದು. ಅಂತಹ ಸಂದರ್ಭಗಳಲ್ಲಿ ಫೋನ್ ಬಳಸುವ ಅಗತ್ಯವಿಲ್ಲದಿದ್ದರೆ ಏರ್ಪ್ಲೇನ್ ಮೋಡ್ ಆನ್ ಮಾಡಿಕೊಳ್ಳುವುದು ಸಹಕಾರಿ.
ಪವರ್ ಬ್ಯಾಂಕ್ ಜೊತೆಗೆ ಇರಲಿ; ದಾಖಲೆಗಳನ್ನು ಆಫ್ ಲೈನ್ ನಲ್ಲಿ ಉಳಿಸಿ
ದೀರ್ಘ ಪ್ರಯಾಣ ಕೈಗೊಳ್ಳುವ ಮೊದಲು ಮೊಬೈಲ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಿ. ಪ್ರಯಾಣಕ್ಕೆ ಸಂಬಂಧಿಸಿದ ಟಿಕೆಟ್ಗಳು, ಬೋರ್ಡಿಂಗ್ ಪಾಸ್ಗಳು ಹಾಗೂ ಇತರ ಪ್ರಮುಖ ದಾಖಲೆಗಳನ್ನು ಮೊದಲೇ ಡೌನ್ಲೋಡ್ ಮಾಡಿಕೊಂಡು ಆಫ್ಲೈನ್ನಲ್ಲಿ ಲಭ್ಯವಾಗುವಂತೆ ಉಳಿಸಿಕೊಳ್ಳಿ. ಇದರಿಂದ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಅಗತ್ಯ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ದೂರದ ಪ್ರಯಾಣದ ವೇಳೆ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಕೊಂಡೊಯ್ಯುವುದು ಕೂಡ ಉಪಯುಕ್ತ. ಆದರೆ ರೈಲು ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಮತ್ತು ಪವರ್ ಬ್ಯಾಂಕ್ ಚಾರ್ಜಿಂಗ್ಗೆ ಸಂಬಂಧಿಸಿದ ರೈಲ್ವೆ ಇಲಾಖೆಯ ಸುರಕ್ಷತಾ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರಾತ್ರಿ ವೇಳೆ ಚಾರ್ಜಿಂಗ್ಗೆ ನಿರ್ಬಂಧವಿದೆ ಎಂಬ ಮಾಹಿತಿಯನ್ನು ಮಾತ್ರ ಆಧರಿಸಿ ನಿರ್ಧಾರ ಕೈಗೊಳ್ಳದೆ, ಪ್ರಯಾಣಿಸುವ ರೈಲಿನಲ್ಲಿರುವ ಪ್ರಸ್ತುತ ನಿಯಮಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಉತ್ತಮ.
ಅನಗತ್ಯ ಆ್ಯಪ್ ಗಳ ಬಳಕೆ ಕಡಿಮೆ ಮಾಡುವುದು, ಸ್ಕ್ರೀನ್ ಹೊಳಪು(ಬ್ರೈಟ್ ನೆಸ್) ನಿಯಂತ್ರಿಸುವುದು, ಬ್ಯಾಟರಿ ಸೇವರ್ ಮೋಡ್ ಬಳಸುವುದು ಹಾಗೂ ಅಗತ್ಯ ದಾಖಲೆಗಳನ್ನು ಆಫ್ಲೈನ್ನಲ್ಲಿ ಉಳಿಸಿಕೊಳ್ಳುವಂತಹ ಸಣ್ಣ ಮುನ್ನೆಚ್ಚರಿಕೆಗಳು ಪ್ರಯಾಣದ ವೇಳೆ ಮೊಬೈಲ್ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರಲು ನೆರವಾಗುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
