ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಆಡಳಿತಾರೂಢ ಬಿಜೆಪಿ ಜುಲೈ ೧೭ ಮತ್ತು ೧೮ ರಂದು ಮತದಾರರ ಶಾಸಕರ ಮೇಲೆ ಲಂಚ ಮತ್ತು ಇತರ ಪ್ರಚೋದನೆ ನೀಡುವ ಮೂಲಕ ಪ್ರಭಾವ ಬೀರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಮತದಾರ ಶಾಸಕರಿಗೆ ಪಂಚತಾರಾ ಹೋಟೆಲ್‌ನಲ್ಲಿ ಐಷಾರಾಮಿ ವಸತಿ ಕಲ್ಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್‌ಡಿಎ ಅಭ್ಯರ್ಥಿ ಮುರ್ಮು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಸಚಿವರು ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಕುರಿತು ಶಾಸಕರಿಗೆ ತರಬೇತಿ ನೀಡುವ ನೆಪದಲ್ಲಿ ಬಿಜೆಪಿಯ ಇತರ ಹಿರಿಯ ನಾಯಕರು ಒಟ್ಟುಗೂಡಿ ಎಲ್ಲಾ ಬಿಜೆಪಿ ಶಾಸಕರನ್ನು ಪಂಚತಾರಾ ಹೋಟೆಲ್‌ಗೆ ಆಹ್ವಾನಿಸಿ ಅವರಿಗೆ ಐಷಾರಾಮಿ ಕೊಠಡಿ, ಊಟ, ಮದ್ಯ, ಮತ್ತು ಮನರಂಜನೆ ಒದಗಿಸಲಾಗಿದೆ ಎಂದು ದೂರು ನೀಡಲಾಗಿದೆ.‘ಬಿಜೆಪಿ ಮುಖಂಡರ ಶಾಸಕರಿಗೆ ಇಷ್ಟೆಲ್ಲ ಸೌಲಭ್ಯಗಳನ್ನು ನೀಡುವ ಮೂಲಕ ದ್ರೌಪದಿ ಮುರ್ಮು ಪರವಾಗಿ ಮತ ಹಾಕುವಂತೆ ಅನಗತ್ಯ ಪ್ರಭಾವ ಬೀರಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ಕಾಂಗ್ರೆಸ್ ಮುಖಂಡರು ದೂರಿನಲ್ಲಿ ತಿಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy