ಗದಗ: ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ಅಪಹರಿಸಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆಯೊಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ 17 ವರ್ಷ 5 ತಿಂಗಳ ಅಪ್ರಾಪ್ತೆಯಾಗಿದ್ದಾಳೆ.
ಅಲ್ಲಾಭಕ್ಷಿ ಕೊಪ್ಪದ ಎಂಬಾತನೇ ಈ ಕೃತ್ಯ ಎಸಗಿದ ಪ್ರಮುಖ ಆರೋಪಿಯಾಗಿದ್ದಾನೆ. ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಸಂತ್ರಸ್ತೆಯ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಕಳೆದ ವರ್ಷ ಅಂದರೆ 2025 ರಲ್ಲಿ ಇದೇ ಬಾಲಕಿಯ ಕುಟುಂಬಸ್ಥರು ಈ ಆರೋಪಿ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಜೈಲು ಸೇರಿದ್ದ ಅಲ್ಲಾಭಕ್ಷಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ತನ್ನನ್ನು ಜೈಲಿಗೆ ಕಳುಹಿಸಿದ ಸೇಡನ್ನು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಆತ, ಮತ್ತೊಮ್ಮೆ ಅದೇ ಸಂತ್ರಸ್ತೆಯನ್ನು ಗುರಿಯಾಗಿಸಿಕೊಂಡು ಈ ಹೀನ ಕೃತ್ಯ ಎಸಗಿದ್ದಾನೆ.
ಮೇ 23 ರಂದು ಬಾಲಕಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದಳು. ಈ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಪೋಸ್ಟ್ ಆಫೀಸ್ ಬಳಿ ಬಂದ ಅಲ್ಲಾಭಕ್ಷಿ ಮತ್ತು ಆತನ ಸ್ನೇಹಿತ ಆಸೀಫ್ ನದಫ್, “ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ” ಎಂದು ಸುಳ್ಳು ಹೇಳಿ ಪುಸಲಾಯಿಸಿದ್ದಾರೆ. ಬಳಿಕ ಆಕೆಯನ್ನು ಬಲವಂತವಾಗಿ ಗೂಡ್ಸ್ ವಾಹನದಲ್ಲಿ ಅಪಹರಿಸಿಕೊಂಡು ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ಜಮೀನೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅಲ್ಲಾಭಕ್ಷಿ ಬಾಲಕಿಯ ಮೇಲೆ 2ನೇ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆ ಸಂಬಂಧ ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಮುಖ ಆರೋಪಿ ಅಲ್ಲಾಭಕ್ಷಿ ಹಾಗೂ ಆತನಿಗೆ ಸಾಥ್ ನೀಡಿದ ಆಸೀಫ್ ನದಫ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಯ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


