ಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಎಸೆದು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಗ್ ಬಾಸ್ ಖ್ಯಾತಿಯ ‘ಡ್ರೋನ್ ಪ್ರತಾಪ್’ಗೆ ಕರ್ನಾಟಕ ಹೈಕೋರ್ಟ್ ದೊಡ್ಡ ಮಟ್ಟದ ರಿಲೀಫ್ ನೀಡಿದ್ದು, ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿ ಆದೇಶಿಸಿದೆ.
ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ನಡೆಸಿದ್ದ ಈ ಪ್ರಯೋಗದ ವೇಳೆ ಸ್ಫೋಟ ಸಂಭವಿಸಿತ್ತು. ಈ ಸಂಬಂಧ ಡ್ರೋನ್ ಪ್ರತಾಪ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಅವರು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರತಾಪ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರತಾಪ್ ನಡೆಸಿದ ಈ ಪ್ರಯೋಗದ ಉದ್ದೇಶವು ಶೈಕ್ಷಣಿಕವಾಗಿಯೇ ಹೊರತು ಯಾವುದೇ ದುರುದ್ದೇಶದಿಂದ ಕೂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಅದೇ ವೇಳೆ, ಭವಿಷ್ಯದಲ್ಲಿ ಇದೇ ರೀತಿಯ ಅಪಾಯಕಾರಿ ಅಥವಾ ಬೇಜವಾಬ್ದಾರಿ ಘಟನೆಗಳು ಮರುಕಳಿಸಿದರೆ, ಅವುಗಳನ್ನು ಕಾನೂನುರೀತ್ಯ ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಕಠಿಣ ಎಚ್ಚರಿಕೆಯನ್ನೂ ನೀಡಿದೆ.
ತೀರ್ಪಿನ ಬಳಿಕ ಕಣ್ಣೀರಿಟ್ಟ ಡ್ರೋನ್ ಪ್ರತಾಪ್:
ಹೈಕೋರ್ಟ್ ತೀರ್ಪು ಹೊರಬಂದ ಬಳಿಕ ವಿಡಿಯೋ ಮೂಲಕ ಮಾತನಾಡಿದ ಡ್ರೋನ್ ಪ್ರತಾಪ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಹಲವು ದಿನಗಳಿಂದ ತಾವು ಎದುರಿಸುತ್ತಿದ್ದ ಮಾನಸಿಕ ಯಮಯಾತನೆ ಮತ್ತು ಕಾನೂನು ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಅವರು ನೆಮ್ಮದಿ ವ್ಯಕ್ತಪಡಿಸಿದ್ದಾರೆ.
“ಎಲ್ಲಾ ಕೇಸ್ಗಳಿಂದ ಮುಕ್ತಗೊಳಿಸಲಾಗಿದೆ. ನನ್ನ ವಿರುದ್ಧ ಹೇಳಬಾರದ್ದನ್ನೆಲ್ಲ ಹೇಳಿದರು, ಏನೇನೋ ಬರೆದರು. ಕೊನೆಗೂ ದೇವರು ಕಣ್ಣುಬಿಟ್ಟಿದ್ದಾನೆ, ಸತ್ಯಕ್ಕೆ ಜಯ ಸಿಕ್ಕಿದೆ. ಕೋರ್ಟ್ನಿಂದ ಪ್ರಕರಣ ರದ್ದಾಗಿದ್ದು, ನಾನು ನಿರಪರಾಧಿ ಎಂದು ಸಾಬೀತಾಗಿದೆ. ಗೌರವಾನ್ವಿತ ಹೈಕೋರ್ಟ್ಗೆ ತಲೆಬಾಗಿ ನಮಸ್ಕರಿಸುತ್ತೇನೆ. ನನ್ನ ಪರವಾಗಿ ಕಾನೂನು ಹೋರಾಟ ನಡೆಸಿದ ವಕೀಲರಿಗೆ ಮತ್ತು ಅವರ ತಂಡಕ್ಕೆ ಧನ್ಯವಾದಗಳು” ಎಂದು ಪ್ರತಾಪ್ ಭಾವುಕರಾಗಿ ನುಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
