ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಭೀತಿ ಎದುರಾಗಿದ್ದು, ರೈತರು ಮತ್ತು ಸಾಮಾನ್ಯ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಗಾಳಿಗೆ ತೂರಿ, ಕೇವಲ ಕುರ್ಚಿ ಉಳಿಸಿಕೊಳ್ಳುವ ಮತ್ತು ದೆಹಲಿ ಪ್ರವಾಸದ ರಾಜಕೀಯದಲ್ಲಿ ಮಗ್ನರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಅವರು, ಮಳೆಯ ಅನಿಶ್ಚಿತತೆಯ ಲಾಭ ಪಡೆದು ಕಾಳಸಂತೆಕೋರರು ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಿ ರೈತರನ್ನು ಲೂಟಿ ಮಾಡಲು ಹೊಂಚು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಜಿಲ್ಲಾವಾರು ದಾಸ್ತಾನು ವಿವರಗಳನ್ನು ಪಾರದರ್ಶಕಗೊಳಿಸಬೇಕು ಮತ್ತು ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬರಗಾಲದಿಂದ ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ. ತಕ್ಷಣವೇ ತಾಲೂಕು ಮಟ್ಟದಲ್ಲಿ ಮೇವು ಬ್ಯಾಂಕ್‌ಗಳನ್ನು ಸಕ್ರಿಯಗೊಳಿಸಬೇಕು. ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಸ್ಥಿತಿ ಬರಬಾರದು ಎಂದರು.
ರಾಜ್ಯದ 12 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದ್ದು, ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುವ ಮೊದಲೇ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದೊ ಒತ್ತಾಯ ಮಾಡಿದ್ದಾರೆ.
ಭತ್ತ, ಜೋಳ ಹಾಗೂ ದ್ವಿದಳ ಧಾನ್ಯಗಳ ಇಳುವರಿ ಕುಂಠಿತಗೊಳ್ಳುವ ಭೀತಿ ಇರುವುದರಿಂದ, ಸರ್ಕಾರ ಈಗಲೇ ಬರ ಪರಿಹಾರದ ಕ್ರಿಯಾ ಯೋಜನೆಯನ್ನು ರೂಪಿಸಿ ಅನ್ನದಾತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
“ದೆಹಲಿಯಲ್ಲಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಮೇಲಾಟಕ್ಕಿಂತ ರಾಜ್ಯದ ಜನರ ಹಿತ ಕಾಯುವುದು ಮುಖ್ಯಮಂತ್ರಿಗಳ ಪ್ರಥಮ ಆದ್ಯತೆಯಾಗಲಿ. ಸರ್ಕಾರ ಕೂಡಲೇ ‘ಬರ ನಿರ್ವಹಣಾ ಸಮಿತಿ’ಯನ್ನು ಸಕ್ರಿಯಗೊಳಿಸಿ, ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ” ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


