ಚಾಮರಾಜಪೇಟೆ: ಈದ್ಗಾ ಮೈದಾನದಲ್ಲಿ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಮೈದಾನದ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಅಳವಡಿಕೆಗೆ ಪೊಲೀಸರು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಮೈದಾನದ ಸುತ್ತ ಸಿಸಿಟಿವಿ ಅಳವಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿ ಹೇಳಿದರೂ ಕ್ಯಾಮೆರಾ ಅಳವಡಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಷ್ಟು ದಿನ ಇಲ್ಲದ ಕ್ಯಾಮೆರಾವನ್ನು ಈಗೇಕೆ ಹಾಕಬೇಕು. ಜನಪ್ರತಿನಿಧಿಗಳು ಮುಸ್ಲಿಮರ ರಕ್ಷಣೆಗೆ ನಿಂತಿದ್ದಾರೆ ಎಂದು ಹಿಂದೂ ಸಂಘಟನೆಯವರು ವಿರೋಧ ವ್ಯಕ್ತಪಡಿಸಿದರು.
ಬಿಬಿಎಂಪಿ ಕಾಮಗಾರಿಯಲ್ಲ. ಇದು ರಕ್ಷಣೆ ಸಂಬಂಧ ಸಿಸಿಟಿವಿ ಅಳವಡಿಸುತ್ತಿದ್ದೇವೆ ಎಂದು ಇನ್‍ಸ್ಪೆಕ್ಟರ್ ಸಮಜಾಯಿಷಿ ನೀಡಿದರು. ಆದರೂ ಸ್ಥಳೀಯರು ಇಲ್ಲಿ ಹಿಂದೂಗಳ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಮಕ್ಕಳು ಆಟವಾಡಲು ಭಯಪಡುತ್ತಾರೆ. ಮೈದಾನದಲ್ಲಿ ಯಾವುದೇ ಒಂದು ವಾಹನವನ್ನು ಪಾರ್ಕ್ ಮಾಡಿಲಿಕ್ಕೆ ಆಗುವುದಿಲ್ಲ ಎಂದು ಹರಿಹಾಯ್ದರು.
ಇದು ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಮೈದಾನ. ಐತಿಹಾಸಿಕ ಆಟದ ಮೈದಾನ. ವಕ್ ಬೋರ್ಡ್‍ನಿಂದ ಈದ್ಗಾ ಎಂದಾಗಿದೆ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಮಾಜಿ ಸದಸ್ಯ ಬಿ.ವಿ.ಗಣೇಶ್, ಸ್ಥಳೀಯರೊಂದಿಗೆ ಸಾಥ್ ನೀಡಿದರು. ಜೆಸಿಬಿ ಕೆಲಸಕ್ಕೆ ಇಲ್ಲಿ ಅವಕಾಶ ಕೊಡುವುದಿಲ್ಲ. ಯಾವುದೇ ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಹೇಗೆ ನಡೆಯುತ್ತದೆ. ಸಿಸಿಟಿವಿ ಅಳವಡಿಕೆಗೆ ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮೈದಾನಕ್ಕೆ ಸಿಸಿ ಕ್ಯಾಮೆರಾದ ಅಗತ್ಯವಿಲ್ಲ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಲ್ಲದೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಗುಂಡಿಗಳನ್ನು ತೋಡಿದ್ದ ಎಜಿ ಉಮೇಶ್ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡು ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು. ಸ್ಥಳೀ ಯರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ತೆರಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz