ಹಾಸನ: ಗ್ರಾಮ ಪಂಚಾಯತಿ ಚುನಾವಣೆಯ ಮೀಸಲಾತಿ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಮಾಡಿದ್ದ ಟೀಕೆಗಳಿಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಶಾಸಕ ಎಚ್.ಡಿ. ರೇವಣ್ಣ ಅವರು ಜಿಲ್ಲಾಧಿಕಾರಿ ಲತಾಕುಮಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಗ್ರಾಮ ಪಂಚಾಯತಿ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಿಸುವಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಮತ್ತು ಕಡತಗಳನ್ನು ಉದ್ದೇಶಪೂರ್ವಕವಾಗಿ ಬಾಕಿ ಇರಿಸಲಾಗಿದೆ ಎಂದು ರೇವಣ್ಣ ಆರೋಪಿಸಿದ್ದರು. ಅಲ್ಲದೆ, “ಇಂಥ ಜಿಲ್ಲಾಧಿಕಾರಿಗಳನ್ನು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಗೊತ್ತಿಲ್ಲ” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು.
ಶಾಸಕರ ಈ ಹೇಳಿಕೆಯಿಂದ ತೀವ್ರ ಬೇಸರಗೊಂಡಿರುವ ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, “ನೀವು ಹೇಳಿದಂತೆ ಕೇಳದಿದ್ದರೆ ಅವರನ್ನು ದ್ವೇಷಿಸುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
“ಒಂದು ವೇಳೆ ನಾವು ನಿಯಮ ಮೀರಿದ್ದರೆ ಕಾನೂನಿನಲ್ಲಿ ಅವಕಾಶವಿದೆ, ನೀವು ಪತ್ರ ಬರೆಯಬಹುದಿತ್ತು. ಆದರೆ ಇಷ್ಟು ಹೀನಾಯವಾಗಿ ಮತ್ತು ಮಾನಸಿಕವಾಗಿ ನೋವಾಗುವಂತೆ ಮಾತನಾಡುವುದು ಒಬ್ಬ ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ. ಡಿಸಿ ಸ್ಥಾನದಲ್ಲಿದ್ದರೂ ಗೌರವ ಸಿಗುವುದಿಲ್ಲ ಎಂದರೆ ಹೇಗೆ?” ಎಂದು ಲತಾಕುಮಾರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಪಟ್ಟಿಯ ವಿಚಾರವಾಗಿ ಹಿರಿಯ ರಾಜಕೀಯ ನಾಯಕ ಹಾಗೂ ಜಿಲ್ಲಾಧಿಕಾರಿ ನಡುವಿನ ಈ ವಾಕ್ಸಮರ ಹಾಸನ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
