ತುಮಕೂರು: ಇಂಗ್ಲಿಷ್ ಭಾಷೆಗೆ ಹೆದರಿದ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ತುಮಕೂರು ತಾಲೂಕಿನ ಉರ್ಡಿಗೆರೆಯಲ್ಲಿ ನಡೆದಿದೆ.
7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯಾಗಿದ್ದು, ಇಂಗ್ಲಿಷ್ ಓದಲು ನನಗೆ ಕಷ್ಟವಾಗುತ್ತದೆ ಎಂದು ಬಾಲಕ ಹೆದರಿದ್ದ. ಬಾಲಕನ ಮನವೊಲಿಸಿದ್ದ ಪೋಷಕರು ಆತನನ್ನು ಶಾಲೆಗೆ ಕಳುಹಿಸಿದ್ದರು ಎನ್ನಲಾಗಿದೆ.
ಇನ್ನೂ ಶಾಲೆಗೆ ಹೋಗಲು ಹೆದರಿದ ಬಾಲಕ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯಲ್ಲಿ ಕುಸಿದು ಬಿದ್ದಿದ್ದ. ತಕ್ಷಣವೇ ಆತನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತುಮಕೂರು ನಗರದ ಕೋತಿ ತೋಪು ಮೂಲದ ದಂಪತಿಯ ಪುತ್ರ ಆತ್ಮಹತ್ಯೆಗೆ ಯತ್ನಿಸಿದ ಬಾಲಕನಾಗಿದ್ದು, ಈತನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗ ಚೆನ್ನಾಗಿ ಕಲಿಯಲಿ ಎನ್ನುವುದು ಪೋಷಕರ ಆಸೆಯಾಗಿದೆ. ಆದರೆ ಪುತ್ರನಿಗೆ ಇಂಗ್ಲಿಷ್ ಕಗ್ಗಂಟಾಗಿದ್ದು, ಶಾಲೆಗೆ ಹೋಗಲು ಹೆದರಿಕೊಳ್ಳುತ್ತಿದ್ದಾನೆ. ಇದೀಗ ಆತ್ಮಹತ್ಯೆಗೆ ಯತ್ನಿಸಿರುವುದರಿಂದ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB