ಸಂತೋಷ್ ಪಾಟೀಲ್ ಅವರು ‘ನನ್ನ ಸಾವಿಗೆ ಈಶ್ವರಪ್ಪನವರೇ ನೇರ ಹೊಣೆ’ ಎಂದು ಡೆತ್ ನೋಟ್ ಸಂದೇಶ ರವಾನಿಸಿದ್ದಾರೆಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಈಶ್ವರಪ್ಪನವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಡಾ.ಜಿ.ಪರಮೇಶ್ವರ್ ಸರ್ಕಾರವನ್ನು ಒತ್ತಾಯಿಸಿದರು.
ಈ ಹಿಂದೆ ದೇಶದ ಪ್ರಧಾನಿಗಳು ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದು ಕರೆದಿದ್ದರು. ಆದರೆ ಈಗ ನೋಂದಾಯಿತ ಗುತ್ತಿಗೆದಾರರ ಸಂಘವೇ ರಾಜ್ಯ ಸರ್ಕಾರದ ಸಚಿವರು ಹಾಗೂ ಪ್ರತಿನಿಧಿಗಳು 40% ಕಮಿಷನ್ ಕೇಳುತ್ತಿರುವ ಬಗ್ಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರೂ, ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಮಗೆ ಪ್ರಧಾನ ಮಂತ್ರಿಗಳೇ ಈ 40% ಕಮಿಷನ್ ಗೆ ಬೆಂಬಲವಾಗಿ ನಿಂತಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ ಎಂದರು.
ಕೆಲವು ವಿಷಯಗಳಲ್ಲಿ ಟ್ವಿಟ್ಟರ್ ನಲ್ಲಿ ಬರುವ ಸಂದೇಶಗಳಿಗೆ ತತ್ ಕ್ಷಣ ಪ್ರತಿಕ್ರಿಯೆ ನೀಡುವ ಪ್ರಧಾನಿಗಳು ಗುತ್ತಿಗೆದಾರರು ಲಿಖಿತ ರೂಪದಲ್ಲಿ ನೀಡಿರುವ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನ ಮೂಡಿಸುತ್ತಿದೆ. ತಕ್ಷಣವೇ ಈ ಕುರಿತು ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.