ಬೆಂಗಳೂರು: ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿರುವ ಹಿನ್ನೆಲೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಕ್ರಾತಿ ಹಬ್ಬಕ್ಕೆ ನಮ್ಮ ಹೊಟ್ಟೆ ಮೇಲೆ ಹೊಡೆಯ ಬೇಡಿ ಎಂದು ನೂರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ ಎಂದಿದ್ದಾರೆ.
ಬೀದಿಬದಿ ವ್ಯಪಾರಿಗಳ ಪ್ರತಿಭಟನೆ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನದಲ್ಲೂ ಇದೆ. ಅವರು ಎರಡು ಮೂರು ಬಾರಿ ನನ್ನನ್ನೂ ಭೇಟಿ ಮಾಡಿದ್ದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರಿಪಡಿಸಬೇಕು. ಫುಟ್ ಪಾತ್ಗಳು ಜನರ ಓಡಾಟಕ್ಕೆ ಮುಕ್ತವಾಗಿರಬೇಕು. ಹೈ ಕೋರ್ಟ್ ಆರ್ಡರ್ ಇದೆ. ಅದನ್ನ ಪಾಲಿಸಬೇಕು. ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಎಲ್ಲಾ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ. ಫುಟ್ ಪಾತ್ ಓಡಾಟಕ್ಕೆ ತೊಂದರೆ ಆದಾಗ ನಾಗರಿಕರಿಂದ ನಮಗೂ ದೂರುಗಳು ಬಂದಿವೆ. ಕೋರ್ಟ್ ನಿರ್ದೆಶನ ಸಹ ಇದೆ. ಅದನ್ನ ನಾವು ಪಾಲಿಸಬೇಕು ಎಂದರು.
ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಅವರು ಅನೇಕ ವಿಚಾರಗಳ ಸಂಬಂಧ ಮಾತನಾಡಿದರು. ಅನುಭವ ಮಂಟಪಕ್ಕೆ ಅನುದಾನ ಕುರಿತು ಬಸವಕಲ್ಯಾಣ ಶಾಸಕ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಅವ್ರು ಹೊಸ ಶಾಸಕರು. ಹೀಗಾಗಿ ಹಂಗ್ ಮಾತಾಡ್ತಾರೆ. ನಿನ್ನೆ ಶಿವಮೊಗ್ಗದಲ್ಲಿ ಸಿಎಂ ಸಾಹೇಬ್ರು ಬಸವಣ್ಣನವರ ಬಗ್ಗೆ ಮಾತಾಡಿದ್ರು. ಅಲ್ಲಮ ಪ್ರಭುಗಳ ಬಗ್ಗೆ ಮಾತನಾಡಿದ್ರು. ಅವ್ರ ಸರ್ಕಾರ ಇದ್ದಾಗ ಯಾಕ್ ಕೇಳಿಲ್ಲ ಅವ್ರು? ಅನುಭವ ಮಂಟಪಕ್ಕೆ ಅನುದಾನ ಕೊಡ್ತಿರೋದೆ ನಮ್ಮ ಸರ್ಕಾರ ಎಂದು ಡಿಕೆಶಿ ತಿಳಿಸಿದರು.