ಬಿಹಾರ: ಯೂಟ್ಯೂಬ್ ನೋಡಿ ಬಾಲಕನಿಗೆ ನಕಲಿ ವೈದ್ಯನೊಬ್ಬ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಪರಿಣಾಮವಾಗಿ 15 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಅಜಿತ್ ಕುಮಾರ್ ಪುರಿ ಎಂಬ ನಕಲಿ ವೈದ್ಯ ಈ ಕೃತ್ಯ ಎಸಗಿದ್ದು, ಬಾಲಕ ಸಾವನ್ನಪ್ಪಿದ ಬೆನ್ನಲ್ಲೇ ಈತ ತಲೆಮರೆಸಿಕೊಂಡಿದ್ದಾನೆ.
ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಮಧುರಾದಲ್ಲಿರುವ ಅಜಿತ್ ಕುಮಾರ್ ಪುರಿಯ ಕ್ಲಿನಿಕ್ ಗೆ ದಾಖಲಿಸಲಾಗಿತ್ತು.
ಬಾಲಕನನ್ನು ಕುಟುಂಬದವರ ಒಪ್ಪಿಗೆ ಇಲ್ಲದೆಯೇ ಅಜಿತ್ ಕುಮಾರ್ ಪುರಿ ಶಸ್ತ್ರ ಚಿಕಿತ್ಸೆ ನಡೆಸಲು ಆರಂಭಿಸಿದ್ದಾನೆ. ಯೂಟ್ಯೂಬ್ ನಲ್ಲಿ ನೋಡುತ್ತಾ, ಶಸ್ತ್ರ ಚಿಕಿತ್ಸೆ ನಡೆಸುತ್ತಿರುವುದನ್ನು ನೋಡಿ ಕುಟುಂಬಸ್ಥರು ಪ್ರಶ್ನಿಸಿದಾಗ, ಡಾಕ್ಟರ್ ನಾನಾ ನೀವಾ ಎಂದು ಗದರಿದ್ದ.
ಆದರೆ ಸ್ವಲ್ಪ ಹೊತ್ತಲ್ಲೇ ಬಾಲಕನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಆತನನ್ನು ತಕ್ಷಣವೇ ಕುಟುಂಬಸ್ಥರು ಪಾಟ್ನಾದ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಾಲಕನ ಸಾವಿನ ನಂತರ ಪುರಿ ಸ್ಥಳದಿಂದ ಪರಾರಿಯಾಗಿದ್ದಾನೆ, ಕುಟುಂಬದವರು ಪೊಲೀಸ್ ದೂರು ದಾಖಲಿಸಿದ್ದಾರೆ. ಅಧಿಕಾರಿಗಳು ನಕಲಿ ವೈದ್ಯ ಮತ್ತು ಅವರ ಕ್ಲಿನಿಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q