ಬೆಂಗಳೂರು: ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರಿಗೆ ರಾಜ್ಯ ಸರ್ಕಾರವು ಸುಮಾರು 1.25 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಲು ಅಧಿಕೃತವಾಗಿ ಅನುಮತಿ ನೀಡಿದೆ.
ದೇವೇಗೌಡರಿಗಾಗಿ ‘ವೋಲ್ವೋ ಎಕ್ಸ್‌ಸಿ 90’ (Volvo XC 90) ಮಾದರಿಯ ಅತ್ಯಾಧುನಿಕ ಹಾಗೂ ಗರಿಷ್ಠ ಸುರಕ್ಷತೆಯ ಕಾರನ್ನು ಖರೀದಿಸಲಾಗುತ್ತಿದೆ. ಈ ಕಾರಿನ ಒಟ್ಟು ಅಂದಾಜು ವೆಚ್ಚ 1,25,65,388 ರೂಪಾಯಿಗಳು ಎಂದು ತಿಳಿದುಬಂದಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಅಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿಶೇಷ ವಿನಾಯಿತಿ ನೀಡಿ, ನೇರವಾಗಿ ಬೆಂಗಳೂರಿನ ‘ಮಾರ್ಷಲ್ ಮೋಟಾರ್ಸ್’ನಿಂದ ಕಾರು ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಕಾರು 2.0 ಲೀಟರ್ ಟರ್ಬೋ ಎಂಜಿನ್ ಹೊಂದಿದ್ದು, ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು 250 hp ಪವರ್ ಮತ್ತು 360 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ದೇವೇಗೌಡರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ, ಅವರಿಗೆ ಕಾರು ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ಕಾರಿನಲ್ಲಿ ಕೆಲವು ಮಾರ್ಪಾಡುಗಳನ್ನು (Modification) ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.
ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿಗಳಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಅವರಿಗೆ ಈ ಸುಸಜ್ಜಿತ ವಾಹನವನ್ನು ಒದಗಿಸಲು ಸರ್ಕಾರ ಮುಂದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


