ಬೆಳಗಾವಿ: ರಾಜ್ಯ ರಾಜಕೀಯದ ಪ್ರಭಾವಿ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಡುತ್ತಿದ್ದ ಇಬ್ಬರು ಫೇಸ್‌ಬುಕ್ ಪೇಜ್‌ಗಳ ಅಡ್ಮಿನ್‌ಗಳ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಎಂಬುವವರು ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ʻಕರುನಾಡ ಕುರುಬಗೌಡ್ರುʼ ಹಾಗೂ ʻಬಂಡಾಯ ಧ್ವನಿʼ ಎಂಬ ಖಾತೆಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಗಂಭೀರವಾದ ಸುಳ್ಳು ಆರೋಪವನ್ನು ಮಾಡಲಾಗಿತ್ತು.
“ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ಧ 37 ಶಾಸಕರಿಂದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಹಿ ಸಂಗ್ರಹ ಮಾಡಿದ್ದಾರೆ” ಎಂಬ ಸುಳ್ಳು ಮಾಹಿತಿಯನ್ನು ಈ ಫೇಸ್‌ಬುಕ್ ಪೇಜ್‌ಗಳಲ್ಲಿ ಪೋಸ್ಟ್ ಮಾಡಲಾಗಿತ್ತು.
ಈ ಸುಳ್ಳು ಆರೋಪವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸಚಿವರ ವಿರುದ್ಧ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿ, ಸಮಾಜದಲ್ಲಿ ಅವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದಲೇ ನಕಲಿ ಫೇಸ್‌ಬುಕ್ ಖಾತೆಗಳ ಮೂಲಕ ಈ ರೀತಿಯ ಸಂಚು ರೂಪಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ದೂರನ್ನು ಸ್ವೀಕರಿಸಿರುವ ಬೆಳಗಾವಿ ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಕಲಿ ಫೇಸ್‌ಬುಕ್ ಖಾತೆಗಳ ಹಿಂದೆ ಯಾರಿದ್ದಾರೆ? ಸಚಿವರ ವಿರುದ್ಧ ಇಂತಹ ಸುಳ್ಳು ವದಂತಿ ಹರಡುವುದರ ಹಿಂದಿರುವ ಅಸಲಿ ಉದ್ದೇಶ ಮತ್ತು ಮಾಸ್ಟರ್ ಮೈಂಡ್ ಯಾರು? ಎಂಬ ಬಗ್ಗೆ ಪೊಲೀಸರು ತಾಂತ್ರಿಕ ತನಿಖೆಯನ್ನು ಆರಂಭಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


