ತುಮಕೂರು: ತುಮಕೂರು ಜಿಲ್ಲೆಯ ರೈತರನ್ನು ಕೈಹಿಡಿಯುವ ಬೆಳೆ ಎಂದರೆ ಸಿಲ್ಕು ಮತ್ತು ಮಿಲ್ಕು ಮಾತ್ರವೇ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರೇಷ್ಮೆ ಬೆಳೆಗಾರರ ಕಾರ್ಯಾಗಾರ ಹಾಗೂ ‘ನನ್ನ ರೇಷ್ಮೆ-ನನ್ನ ಹೆಮ್ಮೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಒಂದು ಎಕರೆ ಭೂಮಿ ಇದ್ದರೆ ಒಂದು ಕುಟುಂಬವನ್ನು ಸಾಕುವಷ್ಟು ಸಾಮರ್ಥ್ಯ ಇರುವುದು ರೇಷ್ಮೆ ಬೆಳೆಗೆ ಮಾತ್ರ ಎಂದು ಹೇಳಿದ ಅವರು, ವಿಶೇಷವಾಗಿ ತುಮಕೂರು ಜಿಲ್ಲೆಯ ರೈತರನ್ನು ಕೈಹಿಡಿಯುವುದು ರೇಷ್ಮೆ ಬೆಳೆ ಮತ್ತು ಹೈನುಗಾರಿಕೆ ಮಾತ್ರ ಎಂದು ಅಭಿಪ್ರಾಯಪಟ್ಟರು.
ರೇಷ್ಮೆ ಉದ್ದಿಮೆ ಕೇವಲ ಬೆಳೆ ಅಲ್ಲ, ಇದೊಂದು ಕೈಗಾರಿಕೆ ಎಂದು ಅವರು ಆ ಕಾರಣದಿಂದಲೇ ಈ ಇಲಾಖೆಯನ್ನು ಕೈಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಇಡಲಾಗಿದೆ ಎಂದರು. ಕಡಿಮೆ ಭೂಮಿಯಲ್ಲಿ ಅತ್ಯಧಿಕ ಲಾಭ ತರಬಹುದಾದ ರೇಷ್ಮೆ ಬೆಳೆಯ ವಿಸ್ತೀರ್ಣವನ್ನು ಹೆಚ್ಚು ಮಾಡಬೇಕಿದೆ ಎಂದ ಅವರು, ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದಲೂ ಪೂರಕ ನೆರವು, ಸಹಕಾರವನ್ನು ನೀಡುವ ಅತ್ಯಂತ ಅವಶ್ಯ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ನೀಡುವ ಹಾಗೂ ರೇಷ್ಮೆ ಉದ್ದಿಮೆಯನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸುವುದಾಗಿ ಅವರು ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ರೈತರು ರೇಷ್ಮೆ ಬೆಳೆಯನ್ನು ಹಾಗೂ ಹೈನುಗಾರಿಕೆಯನ್ನು ಅವಲಂಬಿಸಿರುವುದು ಅನಿವಾರ್ಯ ಮತ್ತು ಅಗತ್ಯ ಎಂದ ಅವರು, ರೇಷ್ಮೆ ಇಲಾಖೆ ಸೇರಿದಂತೆ ಈಗಾಗಲೇ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ನೇಮಕಾತಿಗಳನ್ನು ಮಾಡಿಕೊಳ್ಳಲು ಮುಂದಾಗಿದ್ದು, ಇಲಾಖೆಯನ್ನು ಬಲಪಡಿಸುವ ಎಲ್ಲಾ ಕಾರ್ಯಗಳನ್ನು ರೂಪಿಸುವುದಾಗಿ ಅವರು ತಿಳಿಸಿದರು.
ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ರೇಷ್ಮೆ ಕೃಷಿ ಲಾಭದಾಯಕ ಉದ್ದಿಮೆಯಾಗಿದ್ದು, ಚೀನಾಕ್ಕೆ ಸರಿಸಮಾನವಾಗಿ ಉತ್ತೇಜನಗಳನ್ನು ನಮ್ಮ ರೈತರಿಗೆ ಕೊಡುವ ಅಗತ್ಯವಿದೆ ಎಂದರು. ರೇಷ್ಮೆ ಕೃಷಿಯಲ್ಲಿ ಕೇವಲ ಗೂಡು ಬೆಳೆಯುವುದು ಅಷ್ಟೇ ಅಲ್ಲದೆ, ನೂಲು ಬಿಚ್ಚುವ ತಂತ್ರಜ್ಞಾನಕ್ಕೆ ಉದ್ದಿಮೆಗಳು ಮುಂದಾಗಬೇಕು. ಇದರಿಂದ ರೇಷ್ಮೆ ಕೃಷಿ ಉದ್ದಿಮೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಿದರೆ ಸಾಲದು. ಖಾಸಗಿ ವಲಯಗಳು ನೂಲು ಬಿಚ್ಚುವ ಕೈಗಾರಿಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ತುಮಕೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ರೇಷ್ಮೆ ಬೆಳೆಗಾರರಾದ ಶಿವಾನಂದ್ ಅವರು ಮಾತನಾಡಿ, ರಾಜ್ಯದಲ್ಲಿ ರೇಷ್ಮೆ ಬೇಸಾಯವನ್ನು ಉತ್ತೇಜಿಸುವ ಹಾಗೂ ರೇಷ್ಮೆ ಇಲಾಖೆಯನ್ನು ಬಲಪಡಿಸಲು ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ರೇಷ್ಮೆ ಅಪರ ನಿರ್ದೇಶಕಿ ಬಿ.ಆರ್. ಪ್ರತಿಭಾ, ರೇಷ್ಮೆ ಜಂಟಿ ನಿರ್ದೇಶಕರಾದ ಕೆ.ಎನ್. ರವಿ, ರಾಜಪ್ಪ, ವಿಜ್ಞಾನಿ ಡಾ. ವೈ. ಶ್ರೀನಿವಾಸಲು ಉಪಸ್ಥಿತರಿದ್ದರು. ರೇಷ್ಮೆ ಉಪನಿರ್ದೇಶಕ ಟಿ. ಲಕ್ಷ್ಮಿ ನರಸಯ್ಯ ಸ್ವಾಗತಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:


