ತುಮಕೂರು : ಇತ್ತೀಚೆಗೆ ವಿಜಯಪುರ ಜಿಲ್ಲೆಯ ಗಾಂಧಿನಗರದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕರ ಮೇಲೆ ನಡೆಸಲಾದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ತುಮಕೂರು ಜಿಲ್ಲೆಯ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ತಮ್ಮ ಮನವಿ ಪತ್ರದಲ್ಲಿ, ಪರಿಶಿಷ್ಟ ಜಾತಿ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಜಾತಿನಿಂದನೆಯ ಮಾಡಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸುವುದಲ್ಲದೇ ಹಲ್ಲೆಗೊಳಗಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ನೆರವನ್ನು ನೀಡಬೇಕು, ಕೂಲಿ ಕಾರ್ಮಿಕರ ಕುಟುಂಬಕ್ಕೆ ಉದ್ಯೋಗ, ಪರಿಹಾರ, ಮೂಲಭೂತ ಸೌಕರ್ಯಗಳು ಹಾಗೂ ಸೂಕ್ತ ರಕ್ಷಣೆ ಕೊಡುವಂತೆ ನಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೇವೆಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಊರಿನಲ್ಲಿ ನಡೆಯುವ ಜಾತ್ರೆಗೆಂದು ಉಮೇಶ್ ಮಾದಾರ, ಸದಾಶಿವ ಮಾದಾರ, ಸದಾಶಿವ ಬಬಲಾದಿ ಎಂಬುವರು ಊರಿಗೆ ಹೋಗಿದ್ದರು. ಕಾರ್ಮಿಕರು ಜಾತ್ರೆ ಮುಗಿಸಿ ತಮ್ಮ ಕೆಲಸಗಳಿಗೆ ವಾಪಸ್ಸು ಬಂದಾಗ, ಇಷ್ಟೊಂದು ದಿನ ರಜೆ ಹಾಕಿ ಊರಿಗೆ ಹೋಗಿದ್ದೀರಿ ಎಂದು ಕುಪಿತಗೊಂಡ ಮಾಲೀಕ, ಈ ಮೂವರನ್ನು ಮೂರು ದಿನಗಳ ಕಾಲ ಕೂಡಿ ಹಾಕಿದ್ದಲ್ಲದೇ ಆತನ ಬೆಂಬಲಿಗರು ಸೇರಿ ನಿರಂತರವಾಗಿ ಕಾರ್ಮಿಕರನ್ನು ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ, ಈ ಘಟನೆಯ ಕುರಿತು ರಾಜ್ಯಾದ್ಯಂತ ತೀವ್ರ ಚರ್ಚೆಗೂ ಸಹ ಗ್ರಾಸವಾಗಿತ್ತು, ಜೊತೆಗೆ ವಿವಿಧ ಸುದ್ಧಿ ಮಾಧ್ಯಮಗಳಲ್ಲಿಯೂ ಬಿತ್ತರವಾಗಿತ್ತು. ಇಂತಹ ಪ್ರಕರಣಗಳು ಮತ್ತೊಮ್ಮೆ ಮರುಕಳಿಸದಂತೆ ಸರ್ಕಾರದಿಂದ ಸೂಕ್ತ ರಕ್ಷಣೆ ಮತ್ತು ಕಾನೂನು ರೀತಿಯ ನ್ಯಾಯ ಒದಗಿಸಬೇಕಾಗಿದೆಂದು ಸಂಘಟನೆಯ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಸಹ ಸರ್ಕಾರದ ಮಟ್ಟದಲ್ಲಿ ಈ ಕುರಿತು ಕ್ರಮವಹಿಸಲು ನಾವು ಮನವಿಯನ್ನು ಸಲ್ಲಿಸುತ್ತೇವೆಂದು ಎಂದು ನಿಧಿಕುಮಾರ್ ತಿಳಿಸಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ.ನಿಧಿಕುಮಾರ್, ತುಮಕೂರು ಜಿಲ್ಲಾ ಅಟ್ರಾಸಿಟಿ ಕಮಿಟಿಯ ಸಮಿತಿಯ ಸದಸ್ಯರುಗಳಾದ ಕೆ ಗೋವಿಂದರಾಜ್, ಎ.ರಂಜನ್, ಕೋರಾ ರಾಜಣ್ಣ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಎಸ್., ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ದರ್ಶನ್ ಬಿ.ಆರ್., ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರ್ ನರಸಿಂಹಮೂರ್ತಿ, ಅಲ್ಪಸಂಖ್ಯಾತರ ಘಟಕ ತುಮಕೂರು ತಾಲೂಕು ಅಧ್ಯಕ್ಷರಾದ ಜೆ.ಬಿ.ನೇಶನ್, ತಾಲೂಕು ಅಧ್ಯಕ್ಷರು ರಂಗಸ್ವಾಮಿಯ.ಕೆ.ಎಸ್., ಗಂಗಾಧರ್ ಜಿ.ಆರ್., ಕಿರಣ್ ಕುಮಾರ್ ವೈ.ಎಸ್. ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4