ಚಿಕ್ಕನಾಯನಹಳ್ಳಿ: ಐದುನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನಮ್ಮ ದೇಶ ಹಾಗೂ ಧರ್ಮವನ್ನ ಕಾಪಾಡಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ನಾವುಗಳು ಕೂಡ ಅವರ ಮಾರ್ಗದರ್ಶನದ ಸಂಸ್ಕಾರ ಸಂಸ್ಕೃತಿಯಲ್ಲೇ ನಡೆಯಬೇಕು ಎಂದು ವಿಜಯನಗರ ಮಹಾ ಸಂಸ್ಥಾನ ಅರಸರಾದ 19ನೇ ಶ್ರೀಕೃಷ್ಣದೇವರಾಯರು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಕೇರಳ ಶೈಲಿಯಲ್ಲಿ ಶ್ರೀ ಮಹಾಲಕ್ಷ್ಮೀ ಮದ್ಧರಲಕ್ಕಮ್ಮ ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಜನರು ಪಾಶ್ಚಿಮಾತ್ಯ ರಾಷ್ಟ್ರಗಳ ಇಂಗ್ಲೀಷ್ ಭಾಷೆಗೆ ಮಾರುಹೊಗುವುದಲ್ಲದೆ, ದೇಶದಲ್ಲಿ ಅವಿಭಕ್ತ ಕುಟುಂಬಗಳ ವರ್ಜನೆಯಾಗುತ್ತಿರುವುದು ವಿಷಾದ ಸಂಗತಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಅಮೆರಿಕಾದಲ್ಲಿ ಇದ್ದು, ವಾಸಿಸಿ ಬಂದಿದ್ದಾದರು ನಮ್ಮ ದೇಶದ ಧರ್ಮ ಸಂಸ್ಕತಿ ಬೇರೆ ಯಾವ ರಾಷ್ಟ್ರದಲ್ಲೂ ಸಿಗುವುದಿಲ್ಲ. ನಮ್ಮ ರಾಜ ಮನೆತನದ ಕುಟುಂಬ ಆಗಿರ ಬಹುದು ಅಥವಾ ಜನ ಸಾಮಾನ್ಯರ ಕುಟುಂಬಗಳಾಗಿರ ಬಹುದು ಎಲ್ಲಾ ಅವಿಭಕ್ತ ಕುಟುಂಬದಲ್ಲಿ ಬದುಕಿ ಬಾಳುತ್ತಿದ್ದರು. ರಾಜನಾಗಲಿ ಸಾಮಾನ್ಯ ಪ್ರಜೆಯಾಗಲಿ ಗುರುವಿನ ಅನುಗ್ರಹ ಲಭಿಸಬೇಕು, ಈ ಅನುಭವವನ್ನ ಸ್ವತಃ ತಾವೇ ಪಡೆಕೊಂಡಿರುವುದಾಗಿ ತಿಳಿಸಿದರು.
ವಿಜಯನಗರ ಸಾಮ್ರಾಜ್ಯದಲ್ಲಿ ದೇವಾಲಯಗಳಿಗೆ ಮಹತ್ವವನ್ನ ನೀಡಲಾಗಿತ್ತು. ನಾವು ಕೂಡ ಪಂಪ ವಿರೂಪಾಕ್ಷನನ್ನ ಭಕ್ತಿಯಿಂದ ಪೂಜಿಸುತ್ತೇವೆ. ದೇವರಲ್ಲಿ ನಮಗೆ ಅಪಾರವಾದ ನಂಬಿಕೆ ಇದೆ. ಪಟ್ಟಣದ ಮದ್ಧರಲಕ್ಕಮ್ಮ ದೇವಾಲಯದ ನಿರ್ಮಾಣಕ್ಕೆ ನಮ್ಮ ಹಸ್ತದಿಂದ ಶಂಕುಸ್ಥಾಪನೆ ಕಾರ್ಯ ನೆರವೇರಿದ್ದು, ನಮಗೆ ಸಂತೋಷ ತಂದಿದ್ದು, ದೇವಾಲಯ ಶೀಘ್ರವಾಗಿ ಪೂರ್ಣಗೊಂಡು ಲೋಕಾರ್ಪಣೆಯಾಗಿ ಪ್ರಬುದ್ಧಮಾನಕ್ಕೆ ಬರಲಿ ಎಂದು ಆಶಯದ ನುಡಿಗಳನ್ನಾಡಿದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪಟ್ಟಣದಲ್ಲಿ ಧರ್ಮಾನುಸಾರˌ ಸಮುದಾಯಾನುಸಾರ ಹಾಗೂ ಪ್ರತ್ಯೇಕ ಕುಟುಂಬಗಳ ಆರಾದ್ಯ ದೇವರುಗಳ ಅನೇಕ ದೇವಾಲಯಗಳು ಸ್ಥಾಪಿತವಾಗಿದೆ. ನಾನು ಕೂಡ ಮನೆಯಿಂದ ಆಚೆ ಹೊರಡುವ ಮುನ್ನ ದೇವರ ಪೂಜೆಯನ್ನ ನೆರವೇರಿಸಿ ಮುಂದಿನ ಕೆಲಸಗಳಿಗೆ ತೊಡಗುತ್ತೇನೆ. ಮನುಷ್ಯನಿಗೆ ಶಾಂತಿ ನೆಮ್ಮದಿ ಕಾಣಲು ಭಕ್ತರು ಇಷ್ಟಾರ್ಥ ಸಿದ್ದಿಪಡೆಯಲು ವಿವಿಧ ದೇವರನ್ನ ಬೇಡುತ್ತಾರೆ. ನಂಬಿದ ಭಕ್ತರನ್ನ ದೇವರು ಎಂದಿಗೂ ಕೈಬಿಡುವುದಿಲ್ಲ. ಮನಸ್ಸು ಶುದ್ಧವಾಗಿಟ್ಟುಕೊಂಡು ಇರುವಲ್ಲೆ ಭಗವಂತನ ಸಾಕ್ಷಾತ್ಕಾರ ಪಡಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ ಎಂದ ಅವರು, ಮದ್ದರ ಲಕ್ಕಮ್ಮ ದೇವಾಲಯಕ್ಕೆ ಸ್ವಂತಿಕೆಯಿಂದ ಒಂದು ಲಕ್ಷ ಕಾಣಿಕೆಯಾಗಿ ಹಾಗೂ ಸರ್ಕಾರದಿಂದ ಅನುದಾನ ನೀಡಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಾಲಾಘಟ್ಟದಲ್ಲಿ ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಮದ್ಧರಲಕ್ಕಮ್ಮ ದೇವಿಯ ಪ್ರತಿಷ್ಟಾಪನೆಯಾಗಿತ್ತು ಎನ್ನುವ ಇತಿಹಾಸ ನಮ್ಮ ವಂಶದ ಪೂರ್ವಿಕರಿಂದ ತಿಳಿದು ಬರುತ್ತದೆ. ನಮ್ಮ ವಂಶದವರೇ ದೇವಾಲಯದಲ್ಲಿ ಪೂಜೆಗಳನ್ನ ನಡೆಸುತ್ತಾ ಬಂದಿದ್ದರು. ಅವರ ಮಾರ್ಗದರ್ಶನದಲ್ಲೇ ನಾವುಗಳು ಕೂಡ ದೇವರನ್ನ ಪೂಜಿಸಿಕೊಂಡು ಬಂದಿದ್ದೇವೆ. ದೇವಿಯ ಮಹಿಮೆಯಿಂದ ನಂಬಿದ ಅನೇಕ ಭಕ್ತರಿಗೆ ಒಳಿತಾಗಿದೆ. ದೇವಾಲಯ ನಿರ್ಮಾಣಕ್ಕೆ ಸ್ಥಳ ಚಿಕ್ಕದ್ದಾಗಿರುವುದರಿದ ನಮ್ಮ ಮನೆಯ ಜಾಗವನ್ನ ದೇವಾಯಕ್ಕೆ ಬಿಟ್ಟು ಕೊಡಲಾಗಿದೆ. ಅಲ್ಲದೆ ಬುಡ್ಡಯ್ಯರ ನಾಗರಾಜು ಕುಟುಂಬ ಜಾಗವನ್ನ ನೀಡಿ ದೇವಾಲಯದ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಶಾಸಕರು ಸೇರಿದಂತೆ ಅನೇಕ ದಾನಿಗಳು ತನುಮನ ಧನವನ್ನ ಅರ್ಪಿಸಿದ್ದಾರೆ. ದೇವಾಲಯವು ಕೇರಳ ಶೈಲಿಯಲ್ಲಿ ನಿರ್ಮಾಣವಾಗಲಿದೆ ಎಂದರು.
ಗೊಡೇಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ಪರದೇಶೀಕೇಂದ್ರ ಸ್ವಾಮೀಜಿˌ ಮಾದಿಹಳ್ಳಿ ಶ್ರೀಶೈಲ ಗಿರಿರಾಜ ಶಾಖಾಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿˌ ಶ್ರವಣ ಬೆಳಗೊಳದ ಶಕ್ತಿಮಠದ ಬಸವ ಚೈತನ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯದ ಧರ್ಮದರ್ಶಿ ಸಿ.ಎನ್.ರಂಗಸ್ವಾಮಿˌಮುಖ್ಯ ಆಢಳಿತಾಧಿಕಾರಿ ಸಿ.ಎರ್.ಲಕ್ಷ್ಮೀಶ್ˌ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಹೆಚ್.ಆರ್.ವೆಂಕಟೇಶ್ˌ ಕಾರ್ಯಾಧ್ಯಕ್ಷ ಜ್ಞಾನ ನಿಧಿ ಗೋವಿಂದರಾಜುˌ ಕಾರ್ಯದರ್ಶಿ ರಂಗರಾಜು ಅರಸ್ˌ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿˌ ಪುರಸಭಾ ಮಾಜಿ ಅಧ್ಯಕ್ಷ ದೊರೆಮುದ್ದಯ್ಯ, ವಕೀಲ ಸುನಿಲ್ˌ ಮಡಿವಾಳ ಸಂಘದ ನಾಗರಾಜು ಸೇರಿದಂತೆ ಮುಂತಾದವರಿದ್ದರು. ಹಾಲುಮತ ಕುಲ ಕಸುಬಿನ ಕಂಬಳಿಯನ್ನ ಶ್ರೀಕೃಷ್ಣದೇವರಾಯರಿಗೆ ಹೊದಿಸಿ ಗೌರವಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4