ಬೆಂಗಳೂರು: ರಾಜ್ಯದ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ‘ಋತುಚಕ್ರದ ವೇತನ ಸಹಿತ ರಜೆ’ (Paid Menstrual Leave) ನೀತಿಯನ್ನು ಕಟ್ಟುನಿಟ್ಟಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, “ಋತುಚಕ್ರದ ಅವಧಿಯಲ್ಲಿ ರಜೆ ನೀಡುವುದು ಕೇವಲ ಸೌಲಭ್ಯವಲ್ಲ, ಅದು ಸಂವಿಧಾನದ ವಿಧಿ 21ರ ಅಡಿಯಲ್ಲಿ ಮಹಿಳೆಯರ ಘನತೆ ಮತ್ತು ಆರೋಗ್ಯದ ಹಕ್ಕಿನ ಭಾಗವಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಪುರುಷರು ಮತ್ತು ಮಹಿಳೆಯರು ಕಾನೂನಿನ ದೃಷ್ಟಿಯಲ್ಲಿ ಸಮಾನರಾಗಿದ್ದರೂ, ಜೈವಿಕವಾಗಿ ಭಿನ್ನರಾಗಿದ್ದಾರೆ. ಈ ವ್ಯತ್ಯಾಸವನ್ನು ಗುರುತಿಸಿ ಸೌಲಭ್ಯ ನೀಡುವುದು ಸಮಾನತೆಯ ಉಲ್ಲಂಘನೆಯಲ್ಲ, ಬದಲಿಗೆ ಸಮಾನತೆಗೆ ಅರ್ಥ ನೀಡುವ ಕ್ರಮವಾಗಿದೆ ಎಂದು ಕೋರ್ಟ್ ಹೇಳಿದೆ.
ಅಸಂಘಟಿತ ವಲಯಕ್ಕೂ ಅನ್ವಯ:
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೋಟೆಲ್ ಕಾರ್ಮಿಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೇವಲ ಕಾರ್ಖಾನೆ ಅಥವಾ ಐಟಿ ಕಂಪನಿಗಳಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಹಾಗೂ ಅಸಂಘಟಿತ ವಲಯದ ಮಹಿಳೆಯರಿಗೂ ಈ ರಜೆ ಸೌಲಭ್ಯ ದೊರೆಯಬೇಕು ಎಂದು ಸ್ಪಷ್ಟಪಡಿಸಿದೆ. 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡಲು ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.
ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಕಡ್ಡಾಯ. ಪ್ರಸ್ತಾವಿತ ‘ಕರ್ನಾಟಕ ಮುಟ್ಟಿನ ರಜೆ ಮತ್ತು ನೈರ್ಮಲ್ಯ ಮಸೂದೆ–2025’ ಅನ್ನು ಶೀಘ್ರವಾಗಿ ಕಾನೂನಾಗಿ ರೂಪಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಮಹಿಳಾ ಕಾರ್ಮಿಕರಿಗೆ ಈ ಹಕ್ಕಿನ ಬಗ್ಗೆ ಮಾಹಿತಿ ನೀಡಲು ಉದ್ಯೋಗದಾತರಿಗೆ ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸಂತೋಷ್ ಲಾಡ್, ನಮ್ಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೀತಿಯಾದ ‘ಋತುಚಕ್ರ ರಜೆ ನೀತಿ’ಗೆ ಪೂರಕವಾಗಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಋತುಚಕ್ರ ರಜೆನೀತಿಯನ್ನು ಇಡೀ ದೇಶದಲ್ಲೇ ಸಮರ್ಪಕವಾಗಿ ಹಾಗೂ ಮಾದರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಘನ ನ್ಯಾಯಾಲಯದ ಅಭಿಪ್ರಾಯದಂತೆ “ಮುಟ್ಟಿನ ರಜೆಯು ಮಹಿಳೆಯರ ಘನತೆ, ನ್ಯಾಯಯುತ ಮತ್ತು ಅವರ ವಾಸ್ತವಿಕ ಬದುಕಿನ ಮಾನವೀಯ ಅರಿವು” ಎಂಬುದನ್ನು ಮೂಲ ಆಶಯವಾಗಿಟ್ಟುಕೊಂಡು ಅತಿ ಶೀಘ್ರದಲ್ಲಿ ಎಲ್ಲ ವಲಯಗಳಲ್ಲೂ ಸಹ ತಿಂಗಳಿಗೆ ಒಂದರಂತೆ ಒಟ್ಟು ವರ್ಷಕ್ಕೆ 12 ವೇತನ ಸಹಿತ ಋತುಚಕ್ರ ರಜೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


