ತುಮಕೂರು: ರಾಜ್ಯ ಸರ್ಕಾರ ಕಥಾ ಕೀರ್ತನ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಸುಮಾರು 9 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕೀರ್ತನ ಕ್ಷೇತ್ರವನ್ನೇ ಮರೆತಿದೆ ಎಂದು ಹರಿಕಥಾ ವಿದ್ವಾನ್ ಕಲಾಶ್ರೀ ನರಸಿಂಹದಾಸ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಎಸ್.ಎಸ್.ಪುರಂನಲ್ಲಿ ಕೀರ್ತನ ರಂಗ ಬಳಗ (ರಿ.), ತುಮಕೂರು, ಶ್ರೀ ಸೀತಾರಾಮ ದೇವಸ್ಥಾನ ವಿಶ್ವಸ್ಥ ಸಮಿತಿ, ಎಸ್.ಎಸ್. ಪುರಂ, ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಥಾ ಕೀರ್ತನ ಸಂಭ್ರಮ 2024 ರ ಅಂಗವಾಗಿ ಹಮ್ಮಿಕೊಂಡಿದ್ದ ಕಥಾಕೀರ್ತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತ, ನೃತ್ಯ ಅಕಾಡೆಮಿಯಿಂದ ಕಥಾ ಕೀರ್ತನ ಕ್ಷೇತ್ರವನ್ನು ಬೇರ್ಪಡಿಸಿ ಕಥಾ ಕೀರ್ತನ ಅಕಾಡೆಮಿಯನ್ನು ಸ್ಥಾಪಿಸುವಂತೆ ಹಾಗೂ ಕೀರ್ತನ ಕ್ಷೇತ್ರದ ಸಾಧಕರಾದ ವಸಂತಲಕ್ಷ್ಮೀ÷್ಮ ಮತ್ತು ಕು. ಮಾಲಿನಿಯವರನ್ನು ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಲಕ್ಷಿಸಿರುವುದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಮಟ್ಟದಲ್ಲಿ ಕೀರ್ತನಕಾರರನ್ನು ಕಡೆಗಣಿಸಿರುವ ವಿಚಾರ ಮತ್ತು ಹರಿಕಥೆ ಎಂದರೆ ಏನು ಎಂಬುದಾಗಿ ಇಲಾಖೆಯ ಸಚಿವರು ಸಂಶಯಪಟ್ಟಿರುವುದನ್ನು ಖಂಡಿಸಿದರು.
ಸಂಭಾವನೆಗೆ ಆಗ್ರಹ:
ತುಮಕೂರು ಜಿಲ್ಲಾಡಳಿತದ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ತುಮಕೂರು ದಸರಾ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಜಿಲ್ಲೆಯ ಕಲಾವಿದರಿಗೆ ಸಂಭಾವನೆ ನೀಡದೆ ಕಡೆಗಣಿಸುತ್ತಾ ಮೀನಾಮೇಷ ಎಣಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ತಮಟೆ ವಾದ್ಯ, ನಗಾರಿ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತಿರ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಭಾವನೆ ನೀಡುವಲ್ಲಿ ಜಿಲ್ಲೆಯ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ. ಆದರೆ ಹೊರಗಿನ ಕಲಾವಿದರಿಗೆ ವಿಳಂಬ ಇಲ್ಲದೆ ಅವರು ಕೇಳಿದಷ್ಟು ಅಂದರೆ 10–20 ಲಕ್ಷ ಸಂಭಾವನೆ ಕೊಡಲಾಗಿದೆ ಎಂದ ಅವರು, ಊರಿನ ಸ್ಥಳೀಯ ಕಲಾವಿದರಿಗೆ ಕುಡಿಯಲು ನೀರನ್ನು ಸಹ ನೀಡದೆ, ಕೂಲಿ ಮಾಡಿದ ಹಣವನ್ನು ಕೊಡದೆ ನೋಯಿಸುತ್ತಿರುವುದು ಎಷ್ಟು ಸರಿ ಎಂದು ಜಿಲ್ಲಾಡಳಿತವನ್ನು ಅವರು ಪ್ರಶ್ನಿಸಿ, ಸ್ಥಳೀಯ ಕಲಾವಿದರ ಬಗ್ಗೆ ಜಿಲ್ಲಾಡಳಿತ ತಾಳಿರುವ ಧೋರಣೆ ಖಂಡನೀಯ ಎಂದರು.
ದಸರಾ ಉತ್ಸವದಲ್ಲಿ ಕಾರ್ಯಕ್ರಮದ ನೀಡಿದ ಸಂಭಾವನೆಯನ್ನು ಕೇಳಿದರೆ ಜಿಲ್ಲಾಧಿಕಾರಿಗಳನ್ನು ಕೇಳಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹೇಳುತ್ತಾರೆ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಕೊಟ್ಟಿದ್ದೇವೆ ಅಲ್ಲೇ ಕೇಳಿ ಎನ್ನುತ್ತಾರೆ ಎಂದು ದೂರಿದರು.
ಮೇಲ್ವರ್ಗದ ಜನರ ಕಲಾ ಪ್ರದರ್ಶನಕ್ಕೆ ಹಣ ನೀಡಿ ದಲಿತರು, ಜಿಲ್ಲೆಯ ಕಲಾವಿದರನ್ನು ಜಿಲ್ಲಾಡಳಿತ ಅಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಯಾರನ್ನು ಕೇಳಬೇಕು ಎಂದು ಅವರು ನೋವಿನಿಂದ ಹೇಳಿದರು.
ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿಗೆ ಸ್ಥಳೀಯ ಕಲಾವಿದರನ್ನು ದೂಡಬೇಡಿ. ಹಿಂದುಳಿದ ಸಮುದಾಯದ ಕಲಾವಿದರನ್ನು ನಿರ್ಲಕ್ಷಿಸಿದ್ದೇ ಆದರೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ತಂಡವನ್ನು ನೇಮಿಸುವುದಕ್ಕೂ ಮುನ್ನ ಇಲಾಖೆಯಿಂದ ಹಣ ನೀಡಬೇಕು. ಆ ನಂತರ ಕಾರ್ಯಕ್ರಮಕ್ಕೆ ನಿಯೋಜಿಸಬೇಕು ಎಂದು ಅವರು ರಾಜ್ಯ ಹೋರಾಟಗಾರರ ವೇದಿಕೆಯ ಕಲಾವಿದರ ಪರವಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ವಿಶ್ವಸ್ಥ ಸಮಿತಿ ಪದಾಧಿಕಾರಿಗಳಾದ ಗೋಪಾಲ್, ಪ್ರಕಾಶ್, ಸಿಮೆಂಟ್ ಮಂಜಣ್ಣ, ಮುರುಳೀಧರ್, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx