ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಕಾರ್ಯಾಲಯವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ದಾಖಲೆಗಳನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿ ಅಕ್ಷಯ್ ಕುಮಾರ್ ಹೆಚ್.ಎಂ. ಅವರು ದಿನಾಂಕ 03/09/2026 ಮತ್ತು 09/09/2026 ರಂದು ನಾಲ್ಕು ಪ್ರತ್ಯೇಕ ಅರ್ಜಿಗಳ ಮೂಲಕ ಪಂಚಾಯಿತಿ ವ್ಯಾಪ್ತಿಯ ವಿವಿಧ ದಾಖಲೆಗಳನ್ನು ಕೋರಿ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಲ್ಲಿ 2020 ರಿಂದ 2026 ರವರೆಗೆ ಫಾರಂ 9ರಲ್ಲಿ ಸಲ್ಲಿಸಿರುವ ಸಂಪೂರ್ಣ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳು, ಖಾದಿ ಗ್ರಾಮೋದ್ಯೋಗದ ಮನೆ ಮತ್ತು ನಿವೇಶನದ ಅಸೆಸ್ ಮೆಂಟ್ ಹಾಗೂ ಡಿಮ್ಯಾಂಡ್ ರಿಜಿಸ್ಟರ್ ನ ಯಥಾ ನಕಲು ಪ್ರತಿ, ಸರ್ವೆ ನಂ. 84ರ ಗುಂಡು ತೋಪಿನ 2.20 ಗುಂಟೆ ಜಮೀನಿನಲ್ಲಿ ಹಾಲಿ ಇರುವ ಕಟ್ಟಡಗಳ ಕುರಿತಾದ ಮಾಹಿತಿ ಹಾಗೂ 2024–25ನೇ ಸಾಲಿನ ಸ್ವತ್ತಿನ ಸಂಖ್ಯೆ 616/939ರಿಂದ 623/953 ರವರೆಗಿನ ದಾಖಲೆಗಳ ಪ್ರತಿಗಳನ್ನು ಕೋರಲಾಗಿತ್ತು.
ಅರ್ಜಿದಾರರು ಕೋರಿದ ವಿವಿಧ ಮಾಹಿತಿಗಳಿಗೆ ಉತ್ತರಿಸಿರುವ ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ದಿನಾಂಕ 29/09/2026 ರಂದು ಲಿಖಿತ ಉತ್ತರ ನೀಡಿದ್ದು, ತಾವು ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್ 8(1) ಮತ್ತು 11ರ ಅಡಿಯಲ್ಲಿ ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿ ಆಗಿರುವುದರಿಂದ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಂಚಾಯಿತಿ ಆಡಳಿತಕ್ಕೆ ಸಂಬಂಧಿಸಿದ ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಅಧಿಕೃತ ದಾಖಲೆಗಳನ್ನು ‘ವೈಯಕ್ತಿಕ ಮಾಹಿತಿ’ ಎಂದು ಬಿಂಬಿಸಿ ಮಾಹಿತಿ ನೀಡಲು ಹಿಂದೇಟು ಹಾಕಿರುವುದು ಪಂಚಾಯಿತಿ ಆಡಳಿತದ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
