ತುಮಕೂರು: ಹಂಸಲೇಖ ಅವರು ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ, ಇನ್ನೂ ಎಷ್ಟು ದಿನ ದಲಿತರು ಅಸ್ಪೃಶ್ಯತೆಯನ್ನು ಅನುಭವಿಸಬೇಕು ಎಂದು ಅಲ್ಪಸಂಖ್ಯಾತ ಸಂಘಟನೆಯ ಜಿಲ್ಲಾಧ್ಯಕ್ಷ ಅತೀಖ್ ಅಹಮದ್ ಪ್ರಶ್ನಿಸಿದರು.
ದಲಿತ ಹಾಗೂ ಹಿಂದುಳಿದ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಾದ ಬ್ರಹ್ಮ ಹಂಸಲೇಖ ಅವರ ಪರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಂಸಲೇಖ ಅವರು ಅಸ್ಪೃಶ್ಯತೆಯ ವಿರುದ್ಧ ಮಾತನಾಡಿದ್ದಾರೆಯೇ ವಿನಃ ಯಾರನ್ನೂ ತೇಜೋವಧೆ ಮಾಡಿಲ್ಲ. ಜಾತಿ ಹೋಗಲಾಡಿಸುವ ಬೂಟಾಟಿಕೆಯ ನಾಟಕವನ್ನು ಅವರು ಪ್ರಶ್ನಿಸಿದ್ದಾರೆ. ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಚಾರವಲ್ಲ, ಬಲಿತರ ಮನೆಗೆ ದಲಿತರನ್ನು ಕರೆದುಕೊಂಡು ಹೋಗಿ ಸತ್ಕಾರ ಮಾಡಬೇಕು ಎಂದು ಅವರು ಹೇಳಿದ್ದಾರೆ. ಹಾಗಾಗಿ ನಾವು ಹಂಸಲೇಖ ಅವರಿಗೆ ಬೆಂಬಲ ಸೂಚಿಸುತ್ತೇವೆ ಎಂದು ಅವರು ಹೇಳಿದರು.
ದಲಿತ ಮುಖಂಡರಾದ ಕೂಟ್ಟ ಶಂಕರ್ ಅವರು ಮಾತನಾಡಿ, ಹಂಸಲೇಖರು ದೇಶದ ಹಿರಿಮೆಯನ್ನು ಸಾರುವಂತಹ ಸಮಾನತೆ ಸಂದೇಶವನ್ನು ಸಮಾಜಕ್ಕೆ ತಿಳಿಸಿದ್ದಾರೆ. ಆದರೆ, ಇದನ್ನು ಸಹಿಸದ ಮನುವಾದಿಗಳು ಅವರ ಮೇಲೆ ಒತ್ತಡ ಹೇರಿ ಕ್ಷಮೆಯಾಚಿಸುವಂತೆ ಮಾಡಿರುವುದೇ ಅಲ್ಲದೇ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹಾಗಾಗಿ ಈ ಕೂಡಲೇ ಹಂಸಲೇಖ ಅವರ ವಿರುದ್ಧ ದಾಖಲಾಗಿರುವ ಸುಳ್ಳು ದೂರನ್ನು ರದ್ದುಗೊಳಿಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.
ಬಹುಸಂಖ್ಯಾತರ ಆಹಾರ ಪದ್ಧತಿ ಕುರಿತು ಅವಹೇಳನಾಕಾರಿಯಾಗಿ ಮತ್ತು ಹಂಸಲೇಖ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ,ದೂರು ದಾಖಲಿಸುತ್ತಿರುವ ಘಟನೆಗಳು ನಮ್ಮ ಗಮನದಲ್ಲಿದ್ದು, ಇದು ಮುಂದುವರಿದರೆ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಂಘಟನೆಗಳು ಒಂದಾಗಿ ಸಾಮೂಹಿಕ ಪ್ರತಿದೂರು ದಾಖಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಛಲವಾದಿ ಶೇಖರ್, ಕೂಟ್ಟ ಶಂಕರ್ , ರಂಜನ್ ಎ. ಕೇಬಲ್, ರಘು ಕುಮಾರ್ , ನಟರಾಜ್ ಜಿ.ಎಲ್. ಆರ್ ಪಿ ಐ , ತಾಜ್ ಹುದ್ದಿನ್ ಷರೀಫ್, ಶ್ರೀನಿವಾಸ್ ಅಬ್ಬುತನಹಳ್ಳಿ, ಕೆಂಪರಾಜು, ವಿ.ರಾಮಾಂಜಿ, ಗೋಪಾಲ್ ರಾಮೂರ್ತಿ, ಟಿ.ಪಿ.ಮೋಹನ್ , ಕೃಷ್ಣಮೂರ್ತಿ ನರಸಯ್ಯ , ಗೋಪಿ, ಜೆಸಿಬಿ ವೆಂಕಟೇಶ್, ಟಿ ಸಿ ರಾಮಯ್ಯ, ಭಾನುಪ್ರಕಾಶ್, ರಂಗಯ್ಯ, ಮುನಿರಾಜು, ಭರತ್, ಅಮರ್ ಟಿ.ಸಿ. ಮುಂತಾದವರು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700