ಹಾಸನ: ಹಾಸನ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರವಾಗಿರುವ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿ (Downy Mildew) ರೋಗ ತೀವ್ರವಾಗಿ ವ್ಯಾಪಿಸಿದ್ದು, ಜಿಲ್ಲಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಾಕಿದ ಬಂಡವಾಳವೂ ಕೈಸೇರದೆ ಸಾವಿರಾರು ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಪರಿಹಾರ ಒದಗಿಸುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಶಿವಲಿಂಗೇಗೌಡ ಮನವಿ ಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಮುಸುಕಿನ ಜೋಳವೇ ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮುಖ ಆದಾಯದ ಮೂಲವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಬಿಳಿಸುಳಿ ರೋಗದ ತೀವ್ರ ಬಾಧೆಯಿಂದಾಗಿ ಸಾಲು ಸಾಲು ಜೋಳದ ಪೈರುಗಳು ಒಣಗಿ ನಾಶವಾಗುತ್ತಿವೆ. ಕ್ರಿಮಿನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬಾರದೆ ಬೆಳೆ ಸಂಪೂರ್ಣ ಕೈಕೊಟ್ಟಿದೆ. ಇದರಿಂದಾಗಿ ಬಿತ್ತನೆ, ಗೊಬ್ಬರ ಹಾಗೂ ಕೂಲಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೂಡಿಕೆ ಮಾಡಿದ್ದ ರೈತರು ಈಗ ದಾರಿ ಕಾಣದೆ ಕಂಗಾಲಾಗಿದ್ದಾರೆ, ರೋಗಬಾಧೆ ಹಾಗೂ ಬೆಳೆ ನಷ್ಟದಿಂದ ತೀವ್ರ ಸಂಕಷ್ಟದಲ್ಲಿರುವ ಹಾಸನ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳನ್ನು ತಕ್ಷಣವೇ ‘ಬರಪೀಡಿತ ತಾಲೂಕುಗಳು’ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಬಿಳಿಸುಳಿ ರೋಗದಿಂದ ಹಾನಿಗೊಳಗಾದ ಮುಸುಕಿನ ಜೋಳದ ಬೆಳೆಗಾರರಿಗೆ ಸರ್ಕಾರದಿಂದ ತುರ್ತಾಗಿ ‘ವಿಶೇಷ ಆರ್ಥಿಕ ಪರಿಹಾರ’ವನ್ನು ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ (Crop Damage Survey) ನಡೆಸಿ ವರದಿ ಸಲ್ಲಿಸಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಲಿರುವ ಈ ಸಮಸ್ಯೆಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಿ, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ವರದಿ: ಮಂಜುಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
