ಕೊರಟಗೆರೆ: ಹೇಮಾವತಿ ಕೆನಾಲ್ ಒತ್ತುವರಿಯಾಗಿರುವುದರ ಬಗ್ಗೆ ಸಾಮಾಜಿಕ ಹೋರಾಟಗಾರನ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳ ಆದೇಶದಂತೆ ತುಮಕೂರಿನ ಹೇಮಾವತಿ ನಾಲಾ ಉಪವಿಭಾಗ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒತ್ತುವರಿಯ ಬಗ್ಗೆ ಕಾರ್ಯಾಚರಣೆ ಮಾಡಲಾಯಿತು.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ತೀತಾ ಗ್ರಾ.ಪಂ. ವ್ಯಾಪ್ತಿಯ ಗೊರವನಹಳ್ಳಿ ಗ್ರಾಮದ ಸರ್ವೇ ನಂ.16/3 ರಲ್ಲಿ 120ಮೀ ಉದ್ದದ ನಾಲೆ ಜಾಗ ಒತ್ತುವರಿಯಾದ ಬಗ್ಗೆ ಸಾಮಾಜಿಕ ಹೋರಾಟಗಾರ ಮಂಜುನಾಥ್ ಟಿ.ಕೆ. ಪ್ರಶ್ನಿಸಿ ತೆರವುಗೊಳಿಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದರು, ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಮಧುಗಿರಿ ಎ.ಸಿ. ಮತ್ತು ಕೊರಟಗೆರೆ ತಹಶೀಲ್ದಾರ್ ಗೆ ಪರಿಶೀಲನೆ ನಡೆಸುವಂತೆ ಆದೇಶ ಮಾಡಲಾಗಿತ್ತು.
ಲೋಕಾಯುಕ್ತರ ಆದೇಶದ ಅನ್ವಯ ತುಮಕೂರಿನ ಹೇಮಾವತಿ ನಾಲಾ ಉಪವಿಭಾಗ ಎಇಇ ಮತ್ತು ಕೊರಟಗೆರೆ ಕಂದಾಯ ಇಲಾಖೆ, ಭೂಮಾಪನ ಇಲಾಖೆಯ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೇಮಾವತಿ ಲಿಂಕ್ ಕೆನಾಲ್ ಒತ್ತುವರಿ ಸಂಬಂಧಪಟ್ಟಂತೆ ಸಾಮಾಜಿಕ ಹೋರಾಟಗಾರ ಎದುರಲ್ಲೇ ಅಳತೆ ಮಾಡಿ ಲೋಕಾಯುಕ್ತರಿಗೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಹೇಮಾವತಿ ನಾಲಾ ಉಪವಿಭಾಗ ಜೆಇ ಅವಿನಾಶ್, ಆರ್‍ಐ ಬಸವರಾಜು, ವಿಎ ಪವನ್, ಸರ್ವೇಯರ್ ನಾಗಲಾಂಭಿಕೆ, ಎಡಿಎಲ್‍ಆರ್ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
ನೀರಿನ ಸೋರಿಕೆ ಬಗ್ಗೆ ಸಾರ್ವಜನಿಕರ ಆರೋಪ :
ಗೊರವನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವುದನ್ನು ಹೇಮಾವತಿ ನಾಲಾ ಉಪವಿಭಾಗ ಮತ್ತು ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಹೇಮಾವತಿ ನಾಲೆ ಒತ್ತುವರಿಗೆ ಸಂಬಂಧಪಟ್ಟಂತೆ ಅಳತೆ ಮಾಡಲಾಗಿದೆ. ಆದರೆ ತೀತಾ ಜಲಾಶಯದಿಂದ ಕತ್ತಿ ನಾಗೇನಹಳ್ಳಿಯವರೆಗೆ ಸುಮಾರು 22ಕಿ.ಮೀ ಅಂತರವಿದ್ದು, ಹೇಮಾವತಿ ನಾಲೆಯ ಬಗ್ಗೆ ಅರಿವಿಲ್ಲದೆ ಪರಿಶೀಲನೆ ನಡೆಸಿ ನಾಲೆ ಅಚ್ಚುಕಟ್ಟು ಮಾಡುವಲ್ಲಿ ವಿಫಲತೆಯ ಜೊತೆಗೆ ನೀರಿನ ಸೋರಿಕೆ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸಾರ್ವಜನಿಕರು ಮಾಧ್ಯಮದ ಮುಂದೆ ಪ್ರತ್ಯೇಕವಾಗಿ ಆರೋಪಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಧೀಶರ ಆದೇಶದ ಅನ್ವಯ ಕಸಬಾ ಹೋಬಳಿ ಸರ್ವೇ ನಂ.16/3ರಲ್ಲಿ ಹೇಮಾವತಿ ನಾಲೆ ಮತ್ತು ತೀತಾ ಜಲಾಶಯಕ್ಕೆ ಸಂಬಂಧಿಸಿದ ಭೂಸ್ವಾಧೀನ ಒತ್ತುವಾರಿಯಾಗಿದೆ ಎಂದು ಹೋರಾಟಗಾರರು ದೂರು ನೀಡಿದ್ದರು, ಹೇಮಾವತಿ ನಾಲೆ ಉಪವಿಭಾಗ ಮತ್ತು ಕಂದಾಯ ಇಲಾಖೆ ಸಮಕ್ಷಮದಲ್ಲಿ ಅಳತೆ ಮಾಡಲಾಗಿದೆ. ಭೂ ಸ್ವಾಧೀನದ ಬಗ್ಗೆ ಸರ್ವೇ ಮಾಡಲಾದ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಿ ನಿರ್ದೇಶನ ಪಡೆದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
— ಕೆ.ಮಂಜುನಾಥ್, ತಹಶೀಲ್ದಾರ್, ಕೊರಟಗೆರೆ.
ಹೇಮಾವತಿ ಕೆನಾಲ್ ಜಾಗದಲ್ಲಿ ಅಂಗಡಿ ಮುಗ್ಗಂಟುಗಳು ತಲೆ ಎತ್ತಿರುವುದು ಕಂಡುಬಂದಿದೆ. ಈ ಹಿಂದೆ ಅಳತೆ ಮಾಡಿ ಹೇಮಾವತಿ ನಾಲೆಯ ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಯಿತ್ತು. ಒತ್ತುವರಿಯ ಬಗ್ಗೆ ದೂರು ನೀಡಿದ ಕಾರಣ ಕಂದಾಯ ಇಲಾಖೆ ನೇತೃತ್ವದಲ್ಲಿ ಅಳತೆ ಮಾಡಲಾಗಿದೆ. ಒತ್ತುವರಿ ಬಗ್ಗೆ ಮಧುಗಿರಿ ಉಪ ವಿಭಾಗಧಿಕಾರಿಗಳ ಗಮನಕ್ಕೆ ತಂದು ಚಾನಲ್ ಅಭಿವೃದ್ಧಿ ಪಡಿಸಿ ರೈತರಿಗೆ ಅವಶ್ಯಕತೆ ಇದ್ದಲ್ಲಿ ಚಾನಲ್ ಮೂಲಕ ನೀರು ಹರಿಸಲಾಗುವುದು.
— ಸಂಪತ್ ಕುಮಾರ್, ಎಇಇ, ಹೇಮಾವತಿ ನಾಲಾ ಉಪವಿಭಾಗ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW