ಚಿಕ್ಕನಾಯಕನಹಳ್ಳಿ: ತಾಲೂಕಿನ ಬಹುದಿನಗಳ ಕನಸಾದ ಹೇಮಾವತಿ ನಾಲಾ ಕಾಮಗಾರಿಯು ತೀವ್ರಗತಿಯಲ್ಲಿ ಸಾಗುತ್ತಿದ್ದು, ನವಿಲೇ ಭಾಗದ ಕಾಮಗಾರಿಯನ್ನು ಸಾಧ್ಯವಾದಷ್ಟು ಈ ತಿಂಗಳ ಅಂತ್ಯದೊಳಗೆ ಮುಗಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಬೃಹತ್ ನಾಲಾ ಕಾಮಗಾರಿ ವೀಕ್ಷಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ಎಲ್ಲಾ ರೈತಪರ ಸಂಘಟನೆಗಳು, ಹೇಮಾವತಿ ಹೋರಾಟಗಾರರು, ರಾಜಕೀಯ ಮುಖಂಡರು ಮತ್ತು ಪರಮಪೂಜ್ಯ ಸ್ವಾಮೀಜಿಗಳು ಇದರಲ್ಲಿ ಭಾಗವಹಿಸಬೇಕೆಂದು ಶಾಸಕ ಸಿ.ಬಿ.ಸುರೇಶ್‌ಬಾಬು ಮನವಿ ಮಾಡಿದ್ದಾರೆ.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಒಟ್ಟು 26 ಕೆರೆಗಳಿಗೆ ನೀರು ಹರಿಸುವ ಈ ಮಹತ್ವದ ಯೋಜನೆಗೆ ಸುದೀರ್ಘ ಇತಿಹಾಸವಿದೆ. ಆಯಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದ ನಾಯಕರು ತಮ್ಮ ಪ್ರಯತ್ನಗಳ ಮೂಲಕ ಕಾಮಗಾರಿಯನ್ನು ಮುನ್ನಡೆಸಿದ್ದಾರೆ. ಈ ಹಿಂದೆ ತಾಲೂಕಿನ ಎಲ್ಲಾ ಮಠಾಧೀಶರ ನೇತೃತ್ವದಲ್ಲಿ ಕೆ.ಬಿ. ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಜೊತೆಗೆ ಹುಳಿಯಾರು, ಶೆಟ್ಟಿಕೆರೆ ಭಾಗದ ರೈತರು ಹಾಗೂ ವಿವಿಧ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿವೆ ಎಂದರು.
ಈ ವರ್ಷದ ಅಂತ್ಯದೊಳಗೆ ನೀರು!
“ಎಲ್ಲರ ನಿರಂತರ ಹೋರಾಟದ ಫಲವಾಗಿ ಇಂದು ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಈ ತಿಂಗಳ ಅಂತ್ಯದೊಳಗೆ ದಬ್ಬೇಘಟ್ಟದ ಕೆರೆಯವರೆಗೆ ಚಾನಲ್ ಕೆಲಸ ಪೂರ್ಣಗೊಳ್ಳಲಿದೆ. ಇನ್ನುಳಿದ ಚಿಕ್ಕನಾಯಕನಹಳ್ಳಿ ಭಾಗಕ್ಕೆ ಈ ವರ್ಷದ ಅಂತ್ಯದೊಳಗೆ ನೀರು ಹರಿಯಲಿದೆ.”
— ಸಿ.ಬಿ. ಸುರೇಶ್‌ಬಾಬು, ಶಾಸಕರು
ಜುಲೈ 15 ರಂದು ಪಾದಯಾತ್ರೆ ಮೂಲಕ ವೀಕ್ಷಣೆ:
ಜುಲೈ 15 ರಂದು ನಾಲೆಯ ಮೇಲೆಯೇ ನಡೆದುಕೊಂಡು ಹೋಗಿ ಒಟ್ಟಾಗಿ ಕಾಮಗಾರಿಯನ್ನು ಸಂಪೂರ್ಣವಾಗಿ ವೀಕ್ಷಿಸಲು ತೀರ್ಮಾನಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾರ್ವಜನಿಕರು ಮತ್ತು ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಈ ಬಾರಿ ಗೊರೂರು ಜಲಾಶಯದಿಂದ ತುಮಕೂರು ಭಾಗಕ್ಕೆ ನೀರು ಬಿಡುವ ವೇಳೆಗೆ ಶೆಟ್ಟಿಕೆರೆ ಹಾಗೂ ನವಿಲೇ ಭಾಗಕ್ಕೂ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನಾಲೆಯಲ್ಲಿನ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ಹೂಳೆತ್ತುವ ಕೆಲಸದಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ‘ಚಿಕ್ಕನಾಯಕನಹಳ್ಳಿ ದರ್ಶನ’ ಎಂಬ ಪುಸ್ತಕವನ್ನು ನೀಡಿ ಗೌರವಿಸಲಾಗಿದೆ. ನಾಲೆಯ ಶಾಶ್ವತ ಅಭಿವೃದ್ಧಿಗೆ ವಿಶೇಷವಾಗಿ 150 ಕೋಟಿ ರೂಪಾಯಿಗಳ ಅನುದಾನ ನೀಡಬೇಕು ಅಥವಾ ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ (DMFT) 150 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರು ವಿವರಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಅಧ್ಯಕ್ಷ ನಾಗರಾಜು, ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಪ್ರಮುಖರಾದ ಜಾಕೀರ್, ಸೋಮಶೇಖರ್, ಕಂಟ್ರಾಕ್ಟ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


