ಡಾ.ವಡ್ಡಗೆರೆ ನಾಗರಾಜಯ್ಯ
8722724174
ಹಿಂದೊಮ್ಮೆ ಇದು ವಜ್ರಯಾನ ಕವಲಿನ ಬೌದ್ಧ ಕೇಂದ್ರವಾಗಿದ್ದು ಕಾಲಾನಂತರದಲ್ಲಿ ಕಾಪಾಲಿಕ ಶಾಕ್ತ ಕೇಂದ್ರವಾಗಿ, ಕಾಪಾಲಿಕದಿಂದ ಪಲ್ಲಟಗೊಂಡು ಭೈರವಾರಾಧಕ ನಾಥಸಿದ್ಧರ ನೆಲೆಯಾಗಿ, ಆನಂತರದಲ್ಲಿ ಬೌದ್ಧ- ಕಾಪಾಲಿಕ – ನಾಥ ಪಂಥಗಳು ಒಂದರೊಳಗೊಂದು ಬೆರೆತು ಬಹುರೂಪಿ ದೇಶಿ ಧಾರೆಗಳ ಸಂಗಮ ಕ್ಷೇತ್ರವಾಗಿ ರೂಪಾಂತರವಾಗಿರುವ ಅನೇಕ ಕುರುಹುಗಳನ್ನು ನಾನಿಲ್ಲಿ ಕಂಡುಕೊಂಡೆನು. ಹೆಂಜೇರು ಹೇಮಾವತಿಯ ಸಿದ್ದೇಶ್ವರನ ಆಲಯದ ಪೌಳಿಯಲ್ಲಿ ನಿರ್ಮಿಸಲಾಗಿರುವ ಉಪ ಆಲಯಗಳಲ್ಲಿ ಬೌದ್ಧ ಮತ್ತು ಕಾಪಾಲಿಕ ಪಂಥದ ಕುರುಹುಗಳೊಂದಿಗೆ ನಾಥ ಪಂಥದ ಕುರುಹುಗಳು ಈಗಲೂ ಉಳಿದುಕೊಂಡಿವೆ.
ಹೆಂಜೇರು ಹೇಮಾವತಿ ಪ್ರಧಾನವಾಗಿ ಒಂದು ಶೈವ ಕೇಂದ್ರವಾಗಿದೆ. ಇಲ್ಲಿರುವ ಹೆಂಜೇರು ಸಿದ್ದೇಶ್ವರನನ್ನು ಜನಪದರು ಹೆಂಜೇರಪ್ಪ, ಹೆಂಜಾರಪ್ಪ, ಯಂಜಾರಪ್ಪ, ಹೆಂಜಾರ ಸಿದ್ದಪ್ಪ, ಹೆಂಜಾರು ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಆರಾಧಿಸುತ್ತಾರೆ. ಈಗ ಹೇಮಾವತಿ ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಈ ಊರನ್ನು ಹೆಂಜೇರು (ಕನ್ನಡ) – ಪೆಂಜೇರು ಅಥವಾ ಪೆರುಂಚೇರೈ (ತಮಿಳು) ಹೆಸರುಗಳಿಂದ ಕರೆಯಲಾಗುತ್ತಿತ್ತೆಂದು ಇಲ್ಲಿನ ಸ್ಥಳನಾಮ ಚರಿತ್ರೆಯಿಂದ ತಿಳಿದುಬರುತ್ತದೆ. ಹೆಂಜೇರು ಅಂದರೆ ಅತಿ ಹೆಚ್ಚು ವಿಸ್ತಾರವಾಗಿ ಹಾಗೂ ಬಹುದೂರ ಭೂಪರ್ಯಟನೆ ಮಾಡಿದ ಹಿರೀಕ ಎಂದರ್ಥ. ಮೈಮೇಲೆ ಸರಳ ಕಾಷಾಯ ಚೀವರ ಧರಿಸಿ, ಕೇಶ ಮುಂಡನ ಮಾಡಿಕೊಂಡು, ಕೈನಲ್ಲಿ ಭಿಕ್ಷಾಪಾತ್ರೆ ಹಾಗೂ ಊರುಗೋಲನ್ನು ಹಿಡಿದು ಭಿಕ್ಷಾಟನೆ ಮಾಡುತ್ತಾ ಬಹುದೂರ ಮತ್ತು ವಿಸ್ತಾರವಾಗಿ ಲೋಕಪರ್ಯಟನೆ ಮಾಡುವುದು ಬೌದ್ಧ ಭಿಕ್ಖುಗಳ ಪ್ರಧಾನ ಲಕ್ಷಣ. ಇದು ಕಾಪಾಲಿಕ ಮತ್ತು ನಾಥಸಿದ್ಧರ ಲಕ್ಷಣವೂ ಆಗಿ ಮುಂದುವರೆದಿದೆ. ಅಷ್ಟು ಮಾತ್ರವಲ್ಲದೆ ನೊಳಂಬರ ರಾಜಲಾಂಛನ ಪದ್ಮನಂದಿ. ಅಂದರೆ ಕಮಲದ ಮೇಲೆ ಪ್ರತಿಷ್ಠಾಪಿಸಲಾಗಿರುವ ನಂದಿ. ಬುದ್ಧಗುರು ಕೂಡಾ ಕಮಲದ ಮೇಲೆ ಆಸೀನನಾಗಿರುತ್ತಾನೆ. ಹೆಂಜೇರು ಕಾಪಾಲಿಕ ಕ್ಷೇತ್ರದಲ್ಲಿ ಮೂಲದಲ್ಲಿ ಬೌದ್ಧದ ಗುರುತಾದ ಕಮಲವನ್ನು ಅಳವಡಿಸಿಕೊಂಡಿರುವ ನೊಳಂಬರು ಕಮಲದ ಮೇಲೆ ನಂದಿಯನ್ನು ಸ್ಥಾಪಿಸಿ ರಾಜಲಾಂಛನ ಮಾಡಿಕೊಂಡಿದ್ದಾರೆ.
ಅಮೆರಿಕಾದ ಸಂಶೋಧಕ ಡೇವಿಡ್ ಎನ್ ಲಾರೆಂಜನ್ ಅವರ ಕಾಪಾಲಿಕರು ಮತ್ತು ಕಾಳಾಮುಖರು, ಮರಾಠಿಯ ಪ್ರಖ್ಯಾತ ಸಂಶೋಧಕ ಡಾ.ರಾಮಚಂದ್ರ ಚಿಂತಾಮಣ ಢೇರೆಯವರ ನಾಥ ಸಂಪ್ರದಾಯ ಹಾಗೂ ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕ ಹಾಗೂ ಸಂಶೋಧಕರಾದ ಡಾ.ರಹಮತ್ ತರೀಕೆರೆ ಅವರ ಕರ್ನಾಟಕದ ನಾಥಪಂಥ ಮುಂತಾದವರ ಸಂಶೋಧನಾ ಕೃತಿಗಳು ಈ ಪಂಥಗಳನ್ನು ಕುರಿತು ವಿಸ್ತಾರವಾದ ಮಾಹಿತಿಯನ್ನು ಒದಗಿಸುತ್ತವೆ. ಲಾರೆಂಜನ್ ಹೇಳುವಂತೆ ಕರ್ನಾಟಕದಲ್ಲಿ ಕಾಪಾಲಿಕ ಪಂಥವು ಹತ್ತರಿಂದ ಹದಿಮೂರನೇ ಶತಮಾನಗಳ ಕಾಲಾವಧಿಯಲ್ಲಿ ಬಹಳ ವ್ಯಾಪಕತೆಯನ್ನು ಹೊಂದಿ ಉತ್ತಮವಾದ ಬಗೆಯಲ್ಲಿ ಸಂಘಟಿತವಾಗಿತ್ತು. ನೊಳಂಬ ಅರಸರ ರಾಜಧಾನಿಯಾಗಿದ್ದ ಹೆಂಜೇರು ಹೇಮಾವತಿಯಲ್ಲಿ ಕೂಡಾ ಇದೇ ಅವಧಿಯಲ್ಲಿ ದೇಶಿ ಬಂಡುಕೋರ ಕಾಪಾಲಿಕ ಯೋಗಧಾರೆಯು ಉತ್ಕರ್ಷಾವಸ್ಥೆಯನ್ನು ತಲುಪಿತ್ತು.
ಪ್ರಸ್ತುತ ರಾಯಲಸೀಮೆಯ ಸೀಮಾಂಧ್ರಕ್ಕೆ ಸೇರಿರುವ ಹೇಮಾವತಿಯು ಕರ್ನಾಟಕದ ತುಮಕೂರು ಜಿಲ್ಲೆಯ ಗಡಿಭಾಗದಲ್ಲಿದೆ. ಸಂಪೂರ್ಣ ಕನ್ನಡಮಯವಾಗಿರುವ ಇಲ್ಲಿನ ಜನರ ಭಾಷೆ ಆಚಾರ ವಿಚಾರ ವ್ಯವಹಾರ ಆಲೋಚನೆ ಎಲ್ಲವೂ ಕನ್ನಡತನದಿಂದಲೆರ ತುಂಬಿಹೋಗಿದೆ. ಇಲ್ಲಿಗೆ ಭೇಟಿ ನೀಡುವ ಯಾವುದೇ ಪ್ರವಾಸಿಗರಿಗೆ ಇದು ಕನ್ನಡ ಭಾಷಿಕ ಕರ್ನಾಟಕದ ನೆಲವೇ ಹೊರತು ತೆಲುಗು ಭಾಷಿಕ ಆಂಧ್ರಪ್ರದೇಶದ ನೆಲವಾಗಿರಲು ಸಾಧ್ಯವೇ ಇಲ್ಲವೆಂಬಂತೆ ಭಾವಿಸುವ ಮಟ್ಟಿಗೆ ಇಲ್ಲಿ ಕನ್ನಡತನದ ವಾತಾವರಣ ಮನೆಮಾಡಿದೆ. ಶಾಲೆಗಳಲ್ಲಿ ತೆಲುಗು ಪಠ್ಯಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಬೋಧಿಸಬೇಕಾದ ಪರಿಸ್ಥಿತಿಯನ್ನು ಇಲ್ಲಿನ ಶಿಕ್ಷಕರು ಎದುರಿಸುತ್ತಿರುವುದು ಸುಳ್ಳಲ್ಲ.
ಇಂತಹ ಹೇಮಾವತಿ ಪಟ್ಟಣವನ್ನು ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡು 8 ನೇ ಶತಮಾನದಿಂದ 11 ನೇ ಶತಮಾನದವರೆಗೆ ನೊಳಂಬವಾಡಿ 32,000 ಎಂಬ ವಿಸ್ತಾರವಾದ ಸಾಮ್ರಾಜ್ಯವನ್ನು ನೊಳಂಬರಾಜರು ಆಳಿದ್ದಾರೆ. ಹೇಮಾವತಿ ಪಟ್ಟಣವು ಕರ್ನಾಟಕದ ಈಗಿನ ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರಂ, ಚಿತ್ತೂರು, ಧರ್ಮಪುರಿ ಹಾಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲಾ ಪ್ರಾಂತ್ಯಗಳ ರಾಜಧಾನಿ ಕೇಂದ್ರವಾಗಿತ್ತು. ಈ ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದ ನೊಳಂಬರು ಪಲ್ಲವ ರಾಜವಂಶದ ಮೂಲದವರೆಂದು ಶಾಸನಗಳಲ್ಲಿ ಹೇಳಲಾಗಿದೆ.
ಚಾರಿತ್ರಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಅನೇಕ ವಿಷಯ ವಿಶೇಷಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ಈ ಪ್ರಸಿದ್ಧ ಶೈವ ಕ್ಷೇತ್ರದಲ್ಲಿ ನೊಳಂಬ ರಾಜರು ಕಪ್ಪು ಗ್ರಾನೈಟ್ ಶಿಲೆಯಲ್ಲಿ ಬೃಹತ್ತಾದ ಐದು ಲಿಂಗಗಳು ಹಾಗೂ ಐದು ನಂದಿಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ಕ್ಷೇತ್ರಪಾಲ ದೇವರಾಗಿ ನೆಲೆಸಿರುವ ಶಿವನು ಹೆಂಜೇರು ಸಿದ್ದೇಶ್ವರ ಎಂಬ ಹೆಸರಿನಲ್ಲಿ ಗುಡಿಯೊಳಗೆ ನರರೂಪದಲ್ಲಿದ್ದಾನೆ. ಹೇಮಾವತಿಯು ಆಂಧ್ರಪ್ರದೇಶಕ್ಕೆ ಸೇರಿದ್ದರೂ ಕೂಡಾ ಈ ದೇವತೆಯನ್ನು ನೂರಕ್ಕೆ ನೂರರಷ್ಟು ಕನ್ನಡ ನಾಡಿನ ಭಕ್ತರು ಮನೆದೇವರಾಗಿ ಆರಾಧಿಸುತ್ತಿದ್ದಾರೆ. ವರ್ಷದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಸಿದ್ದೇಶ್ವರ ಸ್ವಾಮಿಯನ್ನು ಜನಪದರು ಹೆಂಜಾರಪ್ಪ, ಹೆಂಜೇರಪ್ಪ, ಯಂಜಾರಪ್ಪ, ಹೆಂಜಾರ ಸಿದ್ದಪ್ಪ ಮುಂತಾದ ಹಲವಾರು ಹೆಸರುಗಳಲ್ಲಿ ಕರೆಯುತ್ತಾರೆಯೇ ಹೊರತು ಲಿಂಗಶಿಲ್ಪವನ್ನು ಸೂಚಿಸಲು ಅನ್ವರ್ಥಕವಾದ ಸಿದ್ಧಲಿಂಗೇಶ್ವರ ಎಂಬ ಹೆಸರಿನಿಂದಾಗಲೀ ಅಥವಾ ನಂದಿಶಿಲ್ಪವನ್ನು ಸೂಚಿಸುವಂತೆ ನಂದೀಶ್ವರ ಎಂಬ ಹೆಸರಿನಿಂದಾಗಲೀ ಕರೆಯುವುದಿಲ್ಲ. ಈ ನಡೆವಳಿಕೆಯಿಂದ ಇಲ್ಲಿ ಸಿದ್ದೇಶ್ವರ ಎಂಬ ಹೆಸರಿನದ್ದೇ ಸಿದ್ಧಪುರುಷನೊಬ್ಬನು ಜೀವಿಸಿದ್ದನೆಂದು ಊಹಿಸಬಹುದು.
ಭಾರತ ದೇಶಾದ್ಯಂತ ಕಂಡುಬರುವ ಇನ್ನುಳಿದ ಶೈವ ಕ್ಷೇತ್ರಗಳಿಗಿಂತ ಭಿನ್ನವಾಗಿ ಹೇಮಾವತಿಯಲ್ಲಿ ನೆಲೆಸಿರುವ ಪರಶಿವನು ಚತುರ್ಭುಜ ಮಾನವನ ರೂಪದಲ್ಲಿ ಕಾಣಿಸುತ್ತಾನೆ. ಒಂದು ಕೈನಲ್ಲಿ ತ್ರಿಶೂಲ, ಮತ್ತೊಂದು ಕೈನಲ್ಲಿ ಡಮರುಗ, ಒಂದು ಕೈನಲ್ಲಿ ಕಪಾಲ ಭಿಕ್ಷಾಪಾತ್ರೆ (ಶಿರವೋಡು) ಮತ್ತೊಂದು ಕೈ ಅಭಯ ಹಸ್ತ ಮುದ್ರೆಯನ್ನು ಹೊಂದಿ ಪಾಣಿಪೀಠದ ಮೇಲೆ ಶಾಂತ ವದನನಾಗಿ ಧ್ಯಾನಸ್ಥ ಭಂಗಿಯಲ್ಲಿ ಒಂದು ಕಾಲನ್ನು ಇಳಿಬಿಟ್ಟು ಮತ್ತೊಂದು ಕಾಲನ್ನು ಮಡಚಿಕೊಂಡು ಲಲಿತಾಸನದಲ್ಲಿ ಕುಳಿತಿದ್ದಾನೆ. ವೈರಿಗಳ ಶಿರಗಳ ತರಿದು ರುಂಡಗಳನ್ನೇ ಮಾಲೆ ಧರಿಸಿ ಶಾಂತ ಚಿತ್ತನಾದಂತೆ ಕಾಣಿಸುವ ಸಿದ್ದೇಶ್ವರನ ಎದೆಯ ಮೇಲೆ ರುಂಡಮಾಲೆ ಅಲಂಕರಿಸಿದೆ.
ಎತ್ತರವಾದ ಆಲಯ ಶಿಖರ, ಗಡಿಯ ಪ್ರವೇಶ ದ್ವಾರದಲ್ಲಿ ಮೂರು ಗೋಪುರಗಳು, ವಿಶಾಲವಾದ ಗುಡಿಪೌಳಿ ಹಾಗೂ ಒಳಾಯತದಲ್ಲಿರುವ ಮಂಟಪಗಳು, ಗಣಪತಿ ಮತ್ತು ಕಾಲಭೈರವನ ಉಪದೇಗುಲಗಳು ಇಲ್ಲಿದ್ದು ಮಾನವನ ರೂಪದಲ್ಲಿ ಸಿದ್ದೇಶ್ವರನಾಗಿ ನೆಲೆಸಿರುವ ಪರಶಿವನ ಮೂರ್ತಿಯ ಎದುರು ನಂದಿಯ ವಿಗ್ರಹ ಇರುವುದಿಲ್ಲ. ಉಳಿದ ಬಹುತೇಕ ಶಿವದೇವಾಲಯಗಳಲ್ಲಿ ಶಿವ ಮತ್ತು ನಂದಿಯ ವಿಗ್ರಹಗಳನ್ನು ಎದುರುಬದುರಾಗಿ ಪ್ರತಿಷ್ಠಾಪಿಸಲಾಗಿರುವುದನ್ನು ನಾವು ನೋಡುತ್ತೇವೆ.
ಮುಖ್ಯ ಗುಡಿಯಲ್ಲಿರುವ ಸಿದ್ದೇಶ್ವರನ ಮೂರ್ತಿಯ ಮೇಲೆ ಉತ್ತರಾಯಣ ಸಂಕ್ರಮಣ ಕಾಲದಲ್ಲಿ ಸೂರ್ಯಾಸ್ತಮಾನದ ಕಿರಣಗಳು ನೇರವಾಗಿ ಸಿದ್ದೇಶ್ವರನ ತಲೆಯನ್ನು ಸ್ಪರ್ಶಿಸಿ ಸೂರ್ಯಾಭಿಷೇಕ ಮಾಡುವುದು ಇಲ್ಲಿನ ವಿಶೇಷ. ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಗವಿಗಂಗಾಧರೇಶ್ವರ, ಚಳ್ಳಕೆರೆ ತಾಲೂಕಿನ ಸಿರಿವಾಳ ಸಿದ್ಧರಾಮೇಶ್ವರ, ಹಂಪಿಯ ವಿರೂಪಾಕ್ಷ ದೇವಾಲಯ ಮುಂತಾದ ಕಡೆಗಳಲ್ಲಿ ಹೀಗೆಯೇ ಸಂಕ್ರಮಣ ಕಾಲದಲ್ಲಿ ಸೂರ್ಯಾಸ್ತದ ಕಿರಣಗಳು ಗರ್ಭಗುಡಿಯ ಮೂರ್ತಿಯ ಮೇಲೆ ಬೀಳುವುದನ್ನು ನೋಡಬಹುದು.
ಹೇಮಾವತಿ ಸುತ್ತಲೂ ಪ್ರಚಲಿತವಾಗಿರುವ ಒಂದು ಐತಿಹ್ಯದ ಪ್ರಕಾರ ಇದೇ ಹೇಮಾವತಿ ಗ್ರಾಮದಲ್ಲಿ ಹದಿನೇಳನೇ ಶತಮಾನದಲ್ಲಿ ಜೀವಿಸಿದ್ದನೆಂದು ಹೇಳಲಾಗುವ
ಕಾಪಾಲಿಕ ಹಠಯೋಗಿ ಹಂಪಣ್ಣನು ಅನೇಕ ಪವಾಡಗಳನ್ನು ಮೆರೆದು ಹೋಗಿದ್ದಾನೆ. ಇಲ್ಲಿ ಹಠಯೋಗಿ ಹಂಪಣ್ಣನ ಗುಡಿ ಮತ್ತು ಜೀವ ಸಮಾಧಿ ಇದೆ. ಜೀವಸಮಾಧಿಗೆ ಗುಡಿಯನ್ನು ನಿರ್ಮಿಸಲಾಗಿದೆ ಎಂಬುದೇ ಹೆಚ್ಚು ಸರಿಯಾದೀತು. ಕಾಪಾಲಿಕ ಹಠಯೋಗಿ ಹಂಪಣ್ಣ ಇದೇ ಗ್ರಾಮದಲ್ಲಿ ಲಿಂಗಾಯತ ಕೃಷಿಕ ಕುಟುಂಬದಲ್ಲಿ ಜನ್ಮಿಸಿದ್ದನೆಂದು ಇಲ್ಲಿನ ಸ್ಥಳಪುರಾಣ ತಿಳಿಸುತ್ತದೆ. ಇವನೊಬ್ಬ ಅಪ್ರತಿಮ ಶಿವಭಕ್ತ. ಇವನು ಪ್ರತಿನಿತ್ಯವೂ ಹೇಮಾವತಿಗೆ ಭೇಟಿ ನೀಡುತ್ತಿದ್ದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ನಡೆಸುತ್ತಿದ್ದನು. ಒಂದು ದಿನ ಹಂಪಣ್ಣ ಯೋಗಿಯು ನೂರಾರು ಜನ ಭಕ್ತರಿಗೆ ಅನ್ನ ದಾಸೋಹ ನಡೆಸುತ್ತಿರುವಾಗ ತುಪ್ಪದ ಕೊರತೆಯುಂಟಾಯಿತಂತೆ. ಆಗ ದೇವಸ್ಥಾನದ ಹತ್ತಿರವಿದ್ದ ಮಜ್ಜನ ಬಾವಿಯ ಗಂಗಮ್ಮನನ್ನು ತುಪ್ಪಕ್ಕಾಗಿ ಪ್ರಾರ್ಥಿಸಿದನಂತೆ. ಹಂಪಣ್ಣನ ಪ್ರಾರ್ಥನೆಗೆ ಒಲಿದ ಗಂಗಮ್ಮ ದೇವತೆಯು, ‘ಪ್ರೀತಿಯ ಸದ್ಭಕ್ತ ಹಂಪಣ್ಣ ಯೋಗಿಯೇ…, ಈ ದಿನ ನಿನ್ನ ಭಕ್ತರ ದಾಸೋಹ ಮುಗಿಯುವತನಕ ನಾನು ತುಪ್ಪದ ರೂಪ ತಾಳುತ್ತೇನೆ. ನಿನಗೆಷ್ಟು ಅಗತ್ಯವಿದೆಯೋ ಅಷ್ಟು ತುಪ್ಪವನ್ನು ನನ್ನ ಈ ಮಜ್ಜನ ಬಾವಿಯಿಂದ ತೆಗೆದುಕೊಂಡು ಹೋಗು. ಅಷ್ಟೇ ಪ್ರಮಾಣದ ತುಪ್ಪವನ್ನು ನೀನು ವಾಪಸ್ ತಂದು ನನಗರ್ಪಿಸಿದಾಗ ನಾನು ಮತ್ತೆ ನೀರಿನ ರೂಪಕ್ಕೆ ಮರಳುತ್ತೇನೆ’ ಎಂದು ಹೇಳಿ ತುಪ್ಪವಾಗಿ ಪರಿವರ್ತಿನೆಯಾದಳಂತೆ. ಕೊಡದಿಂದ ನೀರು ಸೇದಿಕೊಂಡು ಹೊತ್ತೊಯ್ಯುವ ರೀತಿಯಲ್ಲಿಯೇ ಹಂಪಣ್ಣ ಯೋಗಿಯು ಒಂಭತ್ತು ಕೊಡ ತುಪ್ಪವನ್ನು ಬಾವಿಯಿಂದ ಭಕ್ತರ ಊಟಕ್ಕೆ ತೆಗೆದೊಯ್ದನಂತೆ. ದಾಸೋಹ ಮುಗಿದ ನಂತರದಲ್ಲಿ ಭಕ್ತರಿಗೆ ಉಣಲಿಕ್ಕಿದ್ದ ಒಂಭತ್ತು ಕೊಡಗಳಷ್ಟು ಪ್ರಮಾಣದ ತುಪ್ಪವನ್ನು ಸಂಗ್ರಹಿಸಿ ಮಜ್ಜನ ಬಾವಿಗೆ ಸುರಿದು ಗಂಗಮ್ಮನ ಸಾಲ ತೀರಿಸಿದನಂತೆ. ಗಂಗಮ್ಮನು ತುಪ್ಪದ ರೂಪದಿಂದ ನೀರಿನ ರೂಪಕ್ಕೆ ಬದಲಾದಳಂತೆ.
ಮತ್ತೊಂದು ಐತಿಹ್ಯದ ಪ್ರಕಾರ ಹಿಂದೊಮ್ಮೆ ಬಲು ಭೀಕರವಾದ ಬರಗಾಲದಿಂದಾಗಿ ಹೇಮಾವತಿ ಪಟ್ಟಣ ಮತ್ತು ಸುತ್ತಮುತ್ತಲಿನ ಊರುಗಳ ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಉಂಟಾಯಿತು. ಜನ ಜಾನುವಾರು ಪ್ರಾಣಿ ಪಕ್ಷಿಗಳು ತಿನ್ನಲು ಅನ್ನ ಮತ್ತು ಕುಡಿಯಲು ನೀರು ಸಿಗದೆ ಸಾಯತೊಡಗಿದವು. ಜನರೆಲ್ಲರೂ ತಮ್ಮನ್ನು ರಕ್ಷಿಸಲು ಪ್ರಾರ್ಥಿಸಿ ಹಠಯೋಗಿ ಹಂಪಣ್ಣನ ಮರೆಬಿದ್ದರು. ಇಚ್ಛಾಮರಣಿಯಾದ ಹಂಪಣ್ಣನು, ‘ನಾನು ಮಳೆರಾಯನನ್ನು ಪ್ರಾರ್ಥಿಸಿ ಈದಿನ ರಾತ್ರಿಯೊಳಗೆ ಮಳೆ ತರಿಸುತ್ತೇನೆ. ಹಾಗೊಂದು ವೇಳೆ ಮಳೆ ಬಾರದೇ ಹೋದರೆ ಇವತ್ತೇ ರಾತ್ರಿ ನನ್ನ ರುಂಡವನ್ನು ನಾನೇ ಕಟುಗತ್ತಿಯಿಂದ ಕತ್ತರಿಸಿಕೊಂಡು ಆತ್ಮಾರ್ಪಣೆ ಮಾಡಿಕೊಳ್ಳುತ್ತೇನೆ. ಈ ದೇಹವನ್ನು ವಿಸರ್ಜಿಸಿ ಭೂಮಿತಾಯಿಯ ಮಡಿಲು ಸೇರಿಕೊಳ್ಳುತ್ತೇನೆ. ಮಳೆ ಬಾರದಿದ್ದರೆ ನಾಳೆಯ ಸೂರ್ಯೋದಯವನ್ನು ನಾನು ನೋಡಲಾರೆ’ ಎಂದು ಹೇಳಿ ಅದಾಗಾಗಲೇ ತನ್ನ ಸಮಾಧಿಯನ್ನು ತೋಡಿಸಿಕೊಂಡು, ಅದೇ ಸಮಾಧಿ ಗುಂಡಿಯೊಳಗೆ ತನ್ನ ಪಕ್ಕದಲ್ಲಿ ಕತ್ತಿಯನ್ನಿರಿಸಿಕೊಂಡು ಪದ್ಮಾಸನದಲ್ಲಿ ಕುಳಿತು ಮಳೆರಾಯನನ್ನು ಪ್ರಾರ್ಥಿಸಿದನಂತೆ. ಅದೇ ದಿನ ಸಂಜೆ ಮುಗಿಲು ಹರಿದು ಹೋದಂತೆ ಸುರಿಯತೊಡಗಿದ ಮಳೆ ರಾತ್ರಿಯಿಡೀ ಸುರಿದು ಒಂದೇ ರಾತ್ರಿಗೆ ಕೆರೆಕಟ್ಟೆಗಳು ತುಂಬಿ ಕೋಡಿ ಹರಿದವಂತೆ. ಇಂತಹ ಮಹಿಮಾನ್ವಿತನಾದ ಹಂಪಣ್ಣ ಯೋಗಿಯ ಜೀವ ಸಮಾಧಿಗೆ ಭಕ್ತರು ನೇಮದಿಂದ ನಡೆದುಕೊಳ್ಳುತ್ತಾರೆ.
ಹೆಂಜೇರು ಹೇಮಾವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಖನನ ಮಾಡಿದಾಗ ದೊರಕಿರುವ ಆನೇಕ ಪುರಾತನ ವಿಗ್ರಹಗಳು ಇಂದಿನ ಚೆನ್ನೈನಲ್ಲಿರುವ ಮದ್ರಾಸ್ ಮ್ಯೂಸಿಯಂನಲ್ಲಿವೆ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಹೇಮಾವತಿಯಲ್ಲಿ ನೊಳಂಬರ ಶಿಲ್ಪಕಲಾ ಸೌಂದರ್ಯ ಮತ್ತು ಕಲಾನೈಪುಣ್ಯವನ್ನು ನೋಡಿ ಮಾರುಹೋದ ರಾಜೇಂದ್ರ ಚೋಳನು ಹೇಮಾವತಿಯಿಂದ ನಲವತ್ತಕ್ಕೂ ಅಧಿಕ ಸಂಖ್ಯೆಯ ಶಿಲ್ಪಗಳನ್ನು ಹಾಗೂ ಶಿಲಾಕಂಬಗಳನ್ನು ತನ್ನ ಸಾಮ್ರಾಜ್ಯಕ್ಕೆ ಹೊತ್ತೊಯ್ದನೆಂದು ಶಾಸನಗಳು ತಿಳಿಸುತ್ತವೆ.
ಹೇಮಾವತಿಯ ಶಿಲಾಸ್ತಂಬಗಳು, ಶಿವಲಿಂಗಗಳು, ನಂದಿ ವಿಗ್ರಹಗಳು ಹಾಗೂ ಗುಡಿಯ ಮೇಲ್ಚಾವಣಿ ಗವಾಕ್ಷಿ ಮತ್ತು ಕಿಟಕಿಗಳಿಗೆ ಅಳವಡಿಸಿರುವ ಕುಸುರಿ ಕೆತ್ತನೆಯ ಶಿಲ್ಪಗಳು ಕಲಾರಸಿಕರ ಮನಸೂರೆ ಮಾಡುತ್ತವೆ. ಇಂತಹ ಶಿಲ್ಪಸೌಂದರ್ಯದ ಕಾರಣದಿಂದಲೇ ರಾಜೇಂದ್ರ ಚೋಳನು ಇಲ್ಲಿಂದ ತಮಿಳುನಾಡಿಗೆ ಶಿಲಾಸ್ತಂಬಗಳನ್ನು ಹೊತ್ತೊಯ್ದು ತಿರುವಾಡಿ (ತಿರುವಾಡಿಗೈ) ಎಂಬ ಶಿವಾಲಯದಲ್ಲಿ ಶೇಖರಿಸಿದನೆಂದು ಚರಿತ್ರೆ ತಿಳಿಸುತ್ತದೆ.
ಸುಂದರ ಕಲಾಕುಸುರಿಯ ಅನೇಕ ಮೂರ್ತಿ ಶಿಲ್ಪಗಳು, ಲಿಂಗ ಶಿಲ್ಪಗಳು, ಶಿಲಾಕಂಬಗಳು ಮತಧ್ವೇಷದ ದಾಳಿಗೆ ಸಿಲುಕಿ ಮತ್ತು ನಿಧಿಚೋರರಿಂದಾಗಿ ಭಗ್ನಗೊಂಡು ಕೈಕಾಲು ರುಂಡಮುಂಡ ಕತ್ತರಿಸಿ ಚೆಲ್ಲಾಪಿಲ್ಲಿಯಾಗಿ ಈಡಾಡಿದಂತೆ ಹೆಂಜೇರು ಹೇಮಾವತಿ ಸಿದ್ದೇಶ್ವರನ ಗುಡಿಯ ಸುತ್ತಲೂ ಬಿದ್ದಿವೆ.
ಹೇಮಾವತಿಯಲ್ಲಿರುವ ಕ್ಷೇತ್ರಪಾಲ ಸಿದ್ದೇಶ್ವರ ಮತ್ತು ಉಪಗುಡಿಯಲ್ಲಿರುವ ಕಾಲಭೈರವನ ಮೂರ್ತಿಗಳ ಕೈನಲ್ಲಿ ತಲೆಬುರುಡೆಯ (ಕಪಾಲ) ಭಿಕ್ಷಾಪಾತ್ರೆ ಇದೆ. ಕಪಾಲದಲ್ಲಿ ಭಿಕ್ಷಾನ್ನ ಸೇವಿಸುವುದು, ಮೈಗೆ ಮತ್ತು ನೊಸಲಿಗೆ ಚಿತಾಭಸ್ಮ ಬಳಿದುಕೊಳ್ಳುವುದು, ಕಿವಿಗಳಿಗೆ ಕಾನಫಟಾ (ಕಾನ – ಕಿವಿ, ಫಟಾ – ಹರಿದ) ಮಾಡಿಸಿ ಕಿವಿಯುಂಗುರ (ಮುರ, ವಾಲೆ ಮುದ್ರೆ)ಗಳನ್ನು ಧರಿಸಿಕೊಳ್ಳುವುದು, ಖಟ್ವಾಂಗ (ಊರುಗೋಲು, ಯೋಗದಂಡ, ತ್ರಿಶೂಲ) ಹಿಡಿದು ಧಾರ್ಮಿಕ ಭಿಕ್ಷಾಟನೆ ಅನುಸರಿಸಿ ಲೋಕಪರ್ಯಟನೆ ಮಾಡುವುದು ಕಾಪಾಲಿಕ ನಾಥಸಿದ್ಧರ ಪ್ರಧಾನ ಲಕ್ಷಣಗಳು. ಕಾಪಾಲಿಕ ನಾಥ ಗುರುವಿನಿಂದ ದೀಕ್ಷೆಯನ್ನು ಪಡೆದ ಶಿಷ್ಯನು ಕೂಡಾ ಈ ಎಲ್ಲಾ ಗುರುತುಗಳನ್ನು ಅಳವಡಿಸಿಕೊಂಡು ದೇಶ ಪರ್ಯಟನೆ ಮಾಡುತ್ತಾ ಭಿಕ್ಷಾಟನೆಗೆ ಹೋಗುವುದು ಕಡ್ಡಾಯ. ಹೆಂಜೇರು ಹೇಮಾವತಿಯು ಬೌದ್ಧ ಕಾಪಾಲಿಕ ನಾಥಸಿದ್ಧರ ನೆಲೆಯಾಗಿದ್ದರೂ ಸಹ ಇಲ್ಲಿ ಯಾವುದೇ ಶಿಷ್ಯ ದೀಕ್ಷೆಯ ಆಚರಣೆ ನಡೆಯುತ್ತಿಲ್ಲ. ಶೈವ ತಾಂತ್ರಿಕ ಕಾಪಾಲಿಕ ನಾಥ ಪರಂಪರೆಯ ಆಚರಣೆಗಳು ಕಾಣಿಸದೆ ವಿಸ್ಮೃತಿಗೆ ಸರಿದಿದ್ದರೂ ಕೂಡಾ ಇಲ್ಲಿನ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಬೆರೆತುಹೋಗಿರುವ ಕುರುಹುಗಳನ್ನು ಗುರುತಿಸಬಹುದು. ಈಗ ಅಳವಡಿಸಿಕೊಂಡಿರುವ ಸೌಮ್ಯ ಸ್ವರೂಪಿ ಸುಧಾರಿತ ಶೈವಾಚರಣೆ ಮತ್ತು ವೈದಿಕಾರ್ಯರ ನಡೆತೆಗಳಲ್ಲಿಯೂ ಬೌದ್ಧ ಕಾಪಾಲಿಕ ನಾಥದ ಗುರುತುಗಳು ಅಡಗಿಕೊಂಡಿವೆ. ಇದಕ್ಕೆ ನಿದರ್ಶನವಾಗಿ ಹೇಳುವುದಾದರೆ ಹೆಂಜೇರು ಸಿದ್ದೇಶ್ವರನ ಅಪಾರ ಭಕ್ತರು ಗುಡಿಯ ಮುಂದಿರುವ ಅಗ್ನಿಕುಂಡಕ್ಕೆ ಸಿಪ್ಪೆ ಸುಲಿಯದಿರುವ ಉಂಡೆ ತೆಂಗಿನಕಾಯಿ, ಕಳ್ಳೇಕಾಯಿ, ಹರಳುಬೀಜ(ಔಡಲ), ಎಳ್ಳು, ಹುಚ್ಚೆಳ್ಳು ಮುಂತಾದ ಧಾನ್ಯಗಳನ್ನು ಅರ್ಪಿಸಿ ಹಾಗೂ ತುಪ್ಪ ಎಣ್ಣೆ ಸಾಂಭ್ರಾಣಿ ಊದಗಡ್ಡಿ ಕರ್ಪೂರ ವಿಭೂತಿಘಟ್ಟಿ ಧೂಪ ನೈವೇದ್ಯ ಮಾಡಿ ಎಲ್ಲವನ್ನೂ ಸುಡಲಾಗುತ್ತದೆ. ಸುಟ್ಟ ಬೂದಿಯನ್ನು ನೊಸಲು ಮುಂಗೈಮಣಿಕಟ್ಟು ಹಾಗೂ ಕುತ್ತಿಗೆ ಇಕ್ಕೆಲಗಳಿಗೆ, ಭ್ರೂಮಧ್ಯ ಮೂಗಂಬಕ್ಕೆ ಭಕ್ತರು ಬಳಿದುಕೊಳ್ಳುತ್ತಾರೆ. ಮಸಣದ ಬೂದಿಯನ್ನು ಮೈಗೆ ಬಳಿದುಕೊಂಡ ಶಿವನನ್ನು ಆರಾಧಿಸುವ ಕಾಪಾಲಿಕರು ಹಾಗೂ ಶಿವನನ್ನು ಕಾಲಭೈರವನ ರೂಪದಲ್ಲಿ ಆರಾಧಿಸುವ ನಾಥಸಿದ್ಧರು ತಮ್ಮ ಮೈಗಳಿಗೆ ಬೂದಿ ಬಳಿದುಕೊಳ್ಳುವುದನ್ನು ಈ ಆಚರಣೆಯು ಸಂಕೇತಿಸುತ್ತದೆ. ಇಂತಹ ಹಲವಾರು ಕುರುಹುಗಳನ್ನು ನಾವು ಹೆಂಜೇರು ಹೇಮಾವತಿ ಸಿದ್ದೇಶ್ವರನ ಒಕ್ಕಲುಗಳಲ್ಲಿ ನೋಡಬಹುದು.
ಕಾಪಾಲಿಕ, ನಾಥ, ಶಾಕ್ತ, ಅವಧೂತ, ಕಾಳಾಮುಖ, ಆರೂಢ, ಶರಣ, ಸೂಫಿ, ನೀಲಗಾರ, ದೇವರಗುಡ್ಡ ಮುಂತಾದ ಸಿದ್ಧ ಪರಂಪರೆಯ ಯೌಗಿಕ ಗುರುಪಂಥಗಳು ವೇದಶಾಸ್ತ್ರ ಪುರಾಣಗಳ ಪಾರಮ್ಯವನ್ನು, ಹುಟ್ಟಿನ ನೆಲೆಯಿಂದ ಮನುಷ್ಯ ಮನುಷ್ಯರ ನಡುವೆ ಸ್ಪೃಶ್ಯ ಅಸ್ಪೃಶ್ಯರೆಂಬ ಮತ್ತು ಮೇಲುಕೀಳೆಂಬ ಬೇಧಗಳನ್ನು ಸೃಷ್ಟಿಸುವ ಸನಾತನ ವರ್ಣಧರ್ಮವನ್ನು , ಸ್ವರ್ಗ ನರಕಗಳ ಅಸ್ತಿತ್ವವನ್ನು ನಿರಾಕರಿಸುತ್ತವೆ. ಎಲ್ಲಾ ಜಾತಿ ಮತ ಧರ್ಮೀಯರನ್ನು ಲಿಂಗಬೇಧವಿಲ್ಲದೆ ಅಧ್ಯಾತ್ಮಿಕ ದಾರಿಯಲ್ಲಿ ಸೆಳೆದು ನಿಲ್ಲಿಸುತ್ತವೆ.
ಇಂತಹ ಅಪರೂಪದ ಸಾಂಸ್ಕೃತಿಕ ಮಹಿಮೆಯ ಹೆಂಜೇರು ಹೇಮಾವತಿಗೆ ಸಾಧ್ಯವಾದರೆ ನೀವೂ ಒಮ್ಮೆ ಹೋಗಿ ಬನ್ನಿ. ಕ್ಷೇತ್ರಕಾರ್ಯದಲ್ಲಿ ಜೊತೆಗಿದ್ದು ನೆರವಾದ ಅರಿವಿಗರು: ನಿದ್ರಗಟ್ಟೆ ಭೀಮರಾಜು, ಹೆಂಜೇರು ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮಂಜುನಾಥ್ ಹಾಗೂ ಹೇಮಾವತಿ ಗ್ರಾಮ ಸಚಿವಾಲಯದ ಅಧ್ಯಕ್ಷ ತಿಪ್ಪೇಸ್ವಾಮಿ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700