ಹೊಳೆನರಸೀಪುರ: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (KSDC) ವತಿಯಿಂದ ಆಯೋಜಿಸಲಾಗಿರುವ ‘ವಿದೇಶದಲ್ಲಿ ಅಧ್ಯಯನ 2026’ ಬೃಹತ್ ಕಾರ್ಯಕ್ರಮದ ಕುರಿತು ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ತಾಲೂಕಿನಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ.
ಈ ಸಂಬಂಧ ಹೊಳೆನರಸೀಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳಾದ ಗುರುಸ್ವಾಮಿ (JDE) ಹಾಗೂ ಪುರುಷೋತ್ತಮ್ ಹೆಚ್.ಆರ್ (CCT) ಅವರು, ಗ್ರಾಮೀಣ ಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ದೊರೆಯುವ ಸುವರ್ಣಾವಕಾಶಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ತಲುಪಿಸಲು ಮನವಿ ಮಾಡಿದರು.
ಈ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವು ದಿನಾಂಕ 06 ಸೆಪ್ಟೆಂಬರ್ 2026 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ (ಗೇಟ್ ಸಂಖ್ಯೆ 4, ಗಾಯತ್ರಿ ಗ್ರಾಂಡ್) ಬೆಳಿಗ್ಗೆ 09:30 ರಿಂದ ಸಂಜೆ 05:00 ರವರೆಗೆ ನಡೆಯಲಿದೆ. ಈ ಸಮಾವೇಶದಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಜರ್ಮನಿ, ಸಿಂಗಾಪುರ, ಯುಎಇ, ಐರ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಪ್ರಮುಖ 10ಕ್ಕೂ ಹೆಚ್ಚು ದೇಶಗಳ ಸುಮಾರು 75ಕ್ಕೂ ಅಧಿಕ ಪ್ರತಿಷ್ಠಿತ ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ನೇರವಾಗಿ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಅರ್ಹತಾ ಮೌಲ್ಯಮಾಪನ ನಡೆಸಿ ಶೇಕಡಾ 50 ರಷ್ಟು ವಿದ್ಯಾರ್ಥಿವೇತನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಉಚಿತ ಪ್ರವೇಶ ಹೊಂದಿರುವ ಈ ಸಮಾವೇಶದಲ್ಲಿ ತಜ್ಞರಿಂದ ವೈಯಕ್ತಿಕ ಸಮಾಲೋಚನೆ, ವಿಶ್ವವಿದ್ಯಾಲಯ ಪ್ರವೇಶ ಮಾರ್ಗದರ್ಶನ, ವೀಸಾ ಪ್ರಕ್ರಿಯೆ ನೆರವು, ಶೈಕ್ಷಣಿಕ ಸಾಲ ಹಾಗೂ ಹಣಕಾಸು ಸೌಲಭ್ಯ, ಅರ್ಜಿ ಸಲ್ಲಿಕೆ, ಆರೋಗ್ಯ ವಿಮೆ ಮತ್ತು ಭಾಷಾ ನೈಪುಣ್ಯತೆ ಕುರಿತು ಸಮಗ್ರ ಮಾರ್ಗದರ್ಶನ ದೊರೆಯಲಿದೆ.
ತಾಲೂಕಿನ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ studyabroad.ksdckarnataka.com ಮೂಲಕ ಅಥವಾ ಸಹಾಯವಾಣಿ ಸಂಖ್ಯೆಗಳಾದ 7338674791, 7338674794, 7338674798 ಹಾಗೂ 7338674792 ಗಳನ್ನು ಸಂಪರ್ಕಿಸಿ ಮುಂಚಿತವಾಗಿಯೇ ಉಚಿತ ನೋಂದಣಿ ಮಾಡಿಕೊಂಡು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅಧಿಕಾರಿಗಳು ಕೋರಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
