ಹೊಳೆನರಸೀಪುರ: ತಾಲೂಕಿನ ಶ್ರವಣೂರು ಗ್ರಾಮದ ಬಸ್ ನಿಲ್ದಾಣದಲ್ಲಿ ನಿರ್ಲಕ್ಷ್ಯ ಹಾಗೂ ಸ್ವಚ್ಛತೆಯ ಕೊರತೆಯಿಂದಾಗಿ ಪ್ರಯಾಣಿಕರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ, ಅಧಿಕಾರಿಗಳಿಗಾಗಿ ಕಾಯದೆ ಸ್ವತಃ ತಾವೇ ಮುಂದಾಗಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ಥಳೀಯ ವ್ಯಕ್ತಿಯೊಬ್ಬರು ಮಾದರಿಯಾಗಿದ್ದಾರೆ.
ಶ್ರವಣೂರು ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲೇ MSIL ಮದ್ಯದ ಅಂಗಡಿ ಇರುವುದರಿಂದ, ಮದ್ಯಪ್ರಿಯರು ಅಲ್ಲಿಯೇ ಮದ್ಯ ಸೇವಿಸಿ ಬಸ್ ನಿಲ್ದಾಣವನ್ನೇ ‘ಮಿನಿ ಬಾರ್’ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ಪರಿಣಾಮವಾಗಿ ಬಸ್ ನಿಲ್ದಾಣದ ಸುತ್ತಮುತ್ತ ಕಸ-ಕಡ್ಡಿಗಳು, ಖಾಲಿ ಮದ್ಯದ ಬಾಟಲಿಗಳು ಮತ್ತು ಕೊಳಕು ತುಂಬಿಕೊಂಡಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯ:
ಈ ಸಮಸ್ಯೆಯನ್ನು ಗಂಭೀರವಾಗಿ ಗಮನಿಸಿದ ಊರಿನ ವ್ಯಕ್ತಿ ರಘು ಅವರು, ಯಾರ ಸಹಾಯವನ್ನೂ ಅಪೇಕ್ಷಿಸದೆ ಸ್ವತಃ ತಾವೇ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಕೈಯಲ್ಲಿ ಪೊರಕೆ ಹಿಡಿದು ಕಸವನ್ನು ತೆರವುಗೊಳಿಸುವುದರ ಜೊತೆಗೆ, ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಶ್ಲಾಘನೀಯ ಕೆಲಸ ಮಾಡಿದರು.
ಈ ಕುರಿತು ಮಾತನಾಡಿದ ಅವರು, “ನಮ್ಮ ಊರು ಮತ್ತು ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರಬೇಕು. ಅಧಿಕಾರಿಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತೆಯ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಬಸ್ ನಿಲ್ದಾಣದ ಸುತ್ತಮುತ್ತಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
