ಮನೆಯಲ್ಲಿ ಕುಳಿತು ಕೆಲಸ ಮಾಡಿ ತಿಂಗಳಿಗೆ ₹20 ಸಾವಿರದಿಂದ ₹30 ಸಾವಿರದವರೆಗೆ ಸಂಪಾದಿಸಬಹುದು ಎಂಬ ಜಾಹೀರಾತುಗಳನ್ನು ನೋಡುತ್ತಿದ್ದೀರಾ? ಹಾಗಿದ್ದರೆ, ಹಣ ಪಾವತಿಸುವ ಮುನ್ನ ಎಚ್ಚರ ವಹಿಸಿ. ವರ್ಕ್ ಫ್ರಮ್ ಹೋಮ್ ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿರುವ ಆರೋಪಗಳು ಹೆಚ್ಚುತ್ತಿವೆ. ಅಗರಬತ್ತಿ ಪ್ಯಾಕಿಂಗ್, ಕ್ಯಾಂಡಲ್ ತಯಾರಿಕೆ, ನೋಟ್ಬುಕ್ ಬರೆಯುವುದು ಹಾಗೂ ಡೇಟಾ ಎಂಟ್ರಿಯಂತಹ ಸರಳ ಕೆಲಸಗಳನ್ನು ನೀಡುವುದಾಗಿ ನಂಬಿಸಿ ಜನರಿಗೆ ವಂಚನೆ ಮಾಡಲಾಗುತ್ತಿದೆ.
ವಿಶೇಷವಾಗಿ ಮನೆಯಲ್ಲೇ ಇದ್ದುಕೊಂಡು ಆದಾಯ ಗಳಿಸಲು ಬಯಸುವ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರು ಇಂತಹ ಜಾಹೀರಾತುಗಳ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸ್ಆಯಪ್ ಗ್ರೂಪ್ಗಳು ಹಾಗೂ ನಕಲಿ ವೆಬ್ಸೈಟ್ಗಳ ಮೂಲಕ ಉದ್ಯೋಗದ ಆಫರ್ಗಳನ್ನು ಹರಿಬಿಡಲಾಗುತ್ತಿದೆ. ಯಾವುದೇ ಅನುಭವವಿಲ್ಲದಿದ್ದರೂ ಸುಲಭವಾಗಿ ತಿಂಗಳಿಗೆ ₹20 ಸಾವಿರದಿಂದ ₹30 ಸಾವಿರ ಗಳಿಸಬಹುದು ಎಂದು ಆಮಿಷವೊಡ್ಡಲಾಗುತ್ತದೆ.
ಕೆಲಸ ನೀಡುವುದಾಗಿ ಭರವಸೆ ನೀಡುವ ವಂಚಕರು, ನೋಂದಣಿ ಶುಲ್ಕ, ತರಬೇತಿ ಶುಲ್ಕ, ಭದ್ರತಾ ಠೇವಣಿ ಅಥವಾ ಪ್ರೊಸೆಸಿಂಗ್ ಶುಲ್ಕದ ಹೆಸರಿನಲ್ಲಿ ಮುಂಗಡ ಹಣ ಕೇಳುತ್ತಾರೆ. ಕಡಿಮೆ ಮೊತ್ತ ಪಾವತಿಸಿದರೆ ಕೆಲಸ ಸಿಗುತ್ತದೆ ಎಂಬ ನಂಬಿಕೆಯಿಂದ ಅನೇಕರು ಹಣ ವರ್ಗಾಯಿಸುತ್ತಾರೆ. ಆದರೆ ಹಣ ಪಾವತಿಸಿದ ಬಳಿಕ ಕೆಲಸ ನೀಡದೆ ಸಂಪರ್ಕ ಕಡಿತಗೊಳಿಸುವ ಪ್ರಕರಣಗಳು ವರದಿಯಾಗಿವೆ.
ಇನ್ನೂ ಕೆಲವು ವಂಚನೆಗಳಲ್ಲಿ ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ನೀಡಿ ಅಲ್ಪ ಮೊತ್ತದ ಹಣ ಪಾವತಿಸುವ ಮೂಲಕ ನಂಬಿಕೆ ಗಳಿಸಲಾಗುತ್ತದೆ. ಬಳಿಕ ಹೆಚ್ಚಿನ ಆದಾಯದ ಆಮಿಷವೊಡ್ಡಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಹಣ ಪಾವತಿಸಿದ ನಂತರ ಕೆಲಸವೂ ಸಿಗದೆ, ಪಾವತಿಸಿದ ಹಣವೂ ವಾಪಸ್ ಬಾರದೆ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ನಕಲಿ ಉದ್ಯೋಗದ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನ ಹೊರವಲಯದಲ್ಲಿ ಅಗರಬತ್ತಿ ಮತ್ತು ಕ್ಯಾಂಡಲ್ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ 600ಕ್ಕೂ ಹೆಚ್ಚು ಜನರಿಂದ ಮುಂಗಡ ಹಣ ಪಡೆದು ವಂಚಿಸಿರುವ ಆರೋಪವಿದೆ. ಹಾವೇರಿ ಜಿಲ್ಲೆಯಲ್ಲಿ ಪ್ಯಾಕಿಂಗ್ ಕೆಲಸದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವ ಆರೋಪಗಳು ವರದಿಯಾಗಿವೆ. ಹೊಸಕೋಟೆ ಭಾಗದಲ್ಲಿಯೂ ಕೆಲಸದ ಆಸೆಯಿಂದ ಹಣ ಪಾವತಿಸಿ ವಂಚನೆಗೆ ಒಳಗಾದ ಮಹಿಳೆಯರ ಕುರಿತು ದೂರುಗಳು ಕೇಳಿಬಂದಿವೆ.
ದೊಡ್ಡಬಳ್ಳಾಪುರದ ಸಂತ್ರಸ್ತರೊಬ್ಬರು ಪುಸ್ತಕ ಬರೆಯುವ ಕೆಲಸ ನೀಡುವುದಾಗಿ ಹೇಳಿದ್ದರಿಂದ ಹಣ ಪಾವತಿಸಿದ್ದಾಗಿ ತಿಳಿಸಿದ್ದಾರೆ. ಕೆಲಸ ಪೂರ್ಣಗೊಳಿಸಿದ ಬಳಿಕ ಹಣ ಪಡೆಯಲು ಸಂಘಟಕರನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಆಗ ತಾವು ವಂಚನೆಗೆ ಒಳಗಾಗಿರುವುದು ತಿಳಿಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕೆಲಸ ನೀಡುವ ಮೊದಲು ನೋಂದಣಿ ಶುಲ್ಕ ಅಥವಾ ಭದ್ರತಾ ಠೇವಣಿ ಪಾವತಿಸುವಂತೆ ಕೇಳಿದರೆ ಎಚ್ಚರಿಕೆ ವಹಿಸಿ. ಕಂಪನಿಯ ಅಧಿಕೃತ ವೆಬ್ಸೈಟ್, ವಿಳಾಸ, ಸಂಪರ್ಕ ವಿವರಗಳು ಮತ್ತು ಉದ್ಯೋಗದ ನೈಜತೆಯನ್ನು ಪರಿಶೀಲಿಸಿ. ಕಡಿಮೆ ಕೆಲಸಕ್ಕೆ ಅತಿಯಾದ ಸಂಬಳ ನೀಡುವುದಾಗಿ ಹೇಳುವ ಜಾಹೀರಾತುಗಳನ್ನು ಸುಲಭವಾಗಿ ನಂಬಬೇಡಿ.
ಅಪರಿಚಿತ ವ್ಯಕ್ತಿಗಳೊಂದಿಗೆ ಬ್ಯಾಂಕ್ ಖಾತೆಯ ವಿವರಗಳು, ಒಟಿಪಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಈಗಾಗಲೇ ಹಣ ಕಳೆದುಕೊಂಡಿದ್ದರೆ ತಕ್ಷಣವೇ ಬ್ಯಾಂಕ್ಗೆ ಮಾಹಿತಿ ನೀಡಿ, ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ. cybercrime.gov.in ವೆಬ್ಸೈಟ್ ಮೂಲಕವೂ ದೂರು ದಾಖಲಿಸಬಹುದು.
ಮನೆಯಿಂದಲೇ ಆದಾಯ ಗಳಿಸುವ ಆಸೆಯನ್ನು ಬಂಡವಾಳ ಮಾಡಿಕೊಂಡು ವಂಚಕರು ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಹೀಗಾಗಿ, ವರ್ಕ್ ಫ್ರಮ್ ಹೋಮ್ ಉದ್ಯೋಗದ ಆಫರ್ ಬಂದಾಗ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಯಾವುದೇ ಕಾರಣಕ್ಕೂ ಮುಂಗಡ ಹಣ ಪಾವತಿಸಬೇಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
