ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಭಾನುವಾರ ಭೀಕರ ದುರಂತವೊಂದು ಸಂಭವಿಸಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೋರುತ್ತಿದ್ದ ಮನೆಯೊಂದನ್ನು ದುರಸ್ತಿ ಮಾಡುವಾಗ, ಮೇಲ್ಛಾವಣಿ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ಮಾದೇವ್ ಕೃಷ್ಣಪ್ಪ ಬಡಿಗೇರ್ (48) ಮತ್ತು ಸೈಯದ್ ಕೆಂಪವಾಡಿ (32) ಎಂದು ಗುರುತಿಸಲಾಗಿದೆ.
ಕೊಟ್ಟಲಗಿ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ನಂದಗೊಂಡ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಸತತ ಮಳೆಯಿಂದಾಗಿ ಮನೆ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಮನೆ ರಿಪೇರಿ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇಡೀ ಮನೆ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಇಬ್ಬರು ಕಾರ್ಮಿಕರು ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ದುರಂತ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯ ನಡೆಸಿ, ಅವಶೇಷಗಳ ಅಡಿಯಲ್ಲಿದ್ದ ಇಬ್ಬರನ್ನೂ ಹೊರತೆಗೆದಿದ್ದಾರೆ. ತದನಂತರ ಗಂಭೀರ ಸ್ಥಿತಿಯಲ್ಲಿದ್ದ ಕಾರ್ಮಿಕರನ್ನು ನೆರೆಯ ಮಹಾರಾಷ್ಟ್ರದ ಜತ್ತ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಐಗಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


