ತುರುವೇಕೆರೆ: ನಮ್ಮ ತಾಲೂಕಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಆಗಿ ಸೋಮಣ್ಣನವರಿಗೆ 44,000 ಮತಗಳ ಅಂತರ ನೀಡಿ ಗೆಲ್ಲಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸಿದಂತ ಜೆಡಿಎಸ್, ಬಿಜೆಪಿ ಮತದಾರರಿಗೆ ಕೃತಜ್ಞತೆಗಳನ್ನು ಮಾಧ್ಯಮದ ಮೂಲಕ ಸಲ್ಲಿಸುತ್ತೇನೆ ಎಂದು ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಪಟ್ಟಣದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ತಿಳಿಸಿದರು.
ಈ ಕ್ಷೇತ್ರದ ಅಭಿವೃದ್ಧಿಗೆ ವಿ. ಸೋಮಣ್ಣನವರು ಹೆಚ್ಚು ಒತ್ತನ್ನು ಕೊಡಬೇಕು ಎಂದು ಒತ್ತಾಯಿಸಿದರು. ಮುಂದುವರೆದು ಮಾತನಾಡಿ, “ನಮ್ಮ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಮುದಾಯದ ಬೇಡಿಕೆಗಳು ಹೆಚ್ಚಾಗಿದ್ದು, ಅವುಗಳನ್ನು ಈಡೇರಿಸಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗುತ್ತಿರುವುದು ಬಹಳ ಹರ್ಷದಾಯಕವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯು ದಕ್ಷಿಣ ಕರ್ನಾಟಕದಲ್ಲಿ ಬಹಳ ಯಶಸ್ವಿಯಾಗಿದೆ. ನಮ್ಮ ಕ್ಷೇತ್ರದಿಂದಲೂ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಾರ್ಲಿಮೆಂಟಿಗೆ ಕಳಿಸಿರುತ್ತೇವೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ ಮಂಡ್ಯ ಜಿಲ್ಲೆಯ ಜನತೆಗೆ ಧನ್ಯವಾದಗಳು. ಈ ರಾಷ್ಟ್ರದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಒಳ್ಳೆಯ ಫಲಿತಾಂಶ ಜನತೆ ನೀಡಿದ್ದಾರೆ.
ಕೋಲಾರದಲ್ಲಿ ಮಲ್ಲೇಶ್ ಬಾಬುರವರ ಗೆಲುವಿಗಾಗಿ ಮತ ನೀಡಿದ ಮತದಾರರಿಗೂ ಕೃತಜ್ಞತೆಗಳನ್ನು ಹೇಳಿ, ವಿ.ಸೋಮಣ್ಣನವರಿಗೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಿ ಎಂದು ನನ್ನ ಒತ್ತಾಯ. ನಮ್ಮ ಜಿಲ್ಲೆಗೆ ಇದುವರೆಗೂ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿಲ್ಲ. ಮತ್ತೊಮ್ಮೆ ಪ್ರಧಾನಿಯಾಗಲಿರುವ ಮಾನ್ಯ ನರೇಂದ್ರ ಮೋದಿಯವರು ನಮ್ಮ ಜಿಲ್ಲೆಯಲ್ಲಿ ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಸೋಮಣ್ಣನವರಿಗೆ ಸಚಿವ ಸ್ಥಾನ ಕೊಡಿ.
ಸ್ವಾತಂತ್ರ ಬಂದು ಇಷ್ಟು ವರ್ಷಗಳಾದ ನಂತರ ತುಮಕೂರು ಜಿಲ್ಲೆಯಲ್ಲಿ ಅತ್ಯಧಿಕ ಅಂತರದ ಮತಗಳಿಂದ ಗೆಲುವು ಸಾಧಿಸಿರುವುದು ಸೋಮಣ್ಣನವರು ಒಬ್ಬರೇ. ಈ ಅಂತರದಲ್ಲಿ ಗೆಲ್ಲಿಸಿದ ಜನತೆಯ ಪರಿಶ್ರಮಕ್ಕೆ ನಮ್ಮ ಕ್ಷೇತ್ರದ ಸಂಸದರಿಗೆ ಸಚಿವ ಸ್ಥಾನ ನೀಡಿದರೆ ಸಾರ್ಥಕ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕರ ಪುತ್ರ ವೆಂಕಟೇಶ್ ಕೃಷ್ಣಪ್ಪ ಜೆಡಿಎಸ್ ತಾಲೂಕು ವಕ್ತಾರ ವೆಂಕಟಾಪುರ ಯೋಗೀಶ್ ಮುನಿಯೂರು ರಂಗಸ್ವಾಮಿ ಆನೆಕೆರೆ ಗ್ರಾಮ ಪಂಚಾಯತಿ ಸದಸ್ಯ ಪುನೀತ್ ಎ ಹೊಸಹಳ್ಳಿ ಚಂದ್ರಯ್ಯ ಸೇರಿದಂತೆ ಇತರರು ಇದ್ದರು.
ವರದಿ: ಸುರೇಶ್ ಬಾಬು ಎಂ ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


