ಮಂಡ್ಯ: ಭ್ರೂಣಲಿಂಗ ಪತ್ತೆ ಮತ್ತು ಅಪ್ರಾಪ್ತ ಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದ ಗಂಭೀರ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಮೂವರು ಖಾಸಗಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೆ.ಆರ್.ಪೇಟೆಯ ಚೇತನ ಮೆಟರ್ನಿಟಿ ಸೆಂಟರ್ ನ ಡಾ.ದಿವ್ಯಾ ಚೇತನ, ನಾವಿ ಡಯಾಗ್ನಸ್ಟಿಕ್ ಸೆಂಟರ್ ನ ಡಾ. ಹರ್ಷಿತ್ ಮತ್ತು ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್‌ನ ಡಾ. ಹರೀಶ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದರು. ಕೆ.ಆರ್.ಪೇಟೆ ತಾಲೂಕಿನಲ್ಲಿ ಒಟ್ಟು 12 ಎಫ್‌ಐಆರ್‌ಗಳು ದಾಖಲಾಗಿದ್ದು, ಅದರ ಆಧಾರದ ಮೇಲೆ ಈ ಬಂಧನ ನಡೆದಿದೆ.
ತನಿಖೆಯ ವೇಳೆ ಸುಮಾರು 31 ಬಾಲ ಗರ್ಭಿಣಿಯರಿಗೆ (ಅಪ್ರಾಪ್ತ ವಯಸ್ಕರು) ನಿಯಮ ಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಇಲ್ಲಿ 2024ರಲ್ಲಿ 19 ಮತ್ತು 2025ರಲ್ಲಿ 5 ಸೇರಿದಂತೆ ಒಟ್ಟು 24 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಇಲ್ಲಿ 7 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಪೋಕ್ಸೋ ಕಾಯ್ದೆಯಡಿ ಪೊಲೀಸರಿಗೆ ಮಾಹಿತಿ ನೀಡದೆ ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ಮತ್ತು ಲಿಂಗ ಪತ್ತೆ ಪರೀಕ್ಷೆ ನಡೆಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಉಪ ಲೋಕಾಯುಕ್ತರ ಸೂಚನೆಯಂತೆ ಮೈಸೂರು, ಚಾಮರಾಜನಗರ ಮತ್ತು ರಾಮನಗರದ ಅಧಿಕಾರಿಗಳ ತಂಡ ಕೆ.ಆರ್.ಪೇಟೆಯ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಿತ್ತು.
ಈ ವೈದ್ಯರ ಕೃತ್ಯವನ್ನು ‘ಸಮಾಜದಲ್ಲಿ ನಡೆಯುತ್ತಿರುವ ಘೋರ ಅಪರಾಧ’ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಬಣ್ಣಿಸಿದ್ದಾರೆ. ಕೆ.ಆರ್.ಪೇಟೆ ಮಾತ್ರವಲ್ಲದೆ ಮಂಡ್ಯ ಜಿಲ್ಲೆಯ ಇತರ ಆರು ತಾಲೂಕುಗಳಲ್ಲೂ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಬಂಧಿತ ವೈದ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


