ತುಮಕೂರು: ಜಾನಪದ ಸಾಹಿತ್ಯದ ಶೇಕಡಾ ತೊಂಬತ್ತು ಭಾಗ ರಚನೆ ಮಹಿಳೆಯರದ್ದೇ ಆಗಿದ್ದು, ಸಾಹಿತ್ಯದ ಸೃಜನಶೀಲತೆ, ಕ್ರಿಯಾಶೀಲತೆಗಳಿಗೆ ಸಾಕ್ಷಿಯಾಗಿವೆ ಎಂದು ಜೆ. ಸಿ. ಮಾಧುಸ್ವಾಮಿ ಹೇಳಿದರು.
ತಿಪಟೂರಿನಲ್ಲಿ ನಡೆದ ತುಮಕೂರು ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಡಿ ಬಾ ನನ ಕಂದ ಅಂಗಾಲ ತೊಳೆದೇನು ತೆಂಗೀನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೋರೆ ತೊಳೆದೇನು. ಕಲ್ಲುಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ ಪಲ್ಲಕ್ಕಿ ಮೇಲೆ ಮಗ ಬರಲಿ/ ಆ ಮನೆಗೆ ಮಲ್ಲೀಗೆ ಮುಡಿವ ಸೊಸೆ ಬರಲಿ . ಇಂತಹ ಹಾಡುಗಬ್ಬಗಳು ಬುದ್ದಿವಂತ ಹೆಣ್ಣುಮಕ್ಕಳಿಂದ ಮಾತ್ರ ಹುಟ್ಟಲು ಸಾಧ್ಯ ದುರದೃಷ್ಟವಶಾತ್ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾತಿನಿಧ್ಯ, ಸಮಾನತೆ ವಿವಿಧ ಕಾರಣಗಳಿಂದಾಗಿ ದೊರೆಯಲೇ ಇಲ್ಲ. ಎಂದು ವಿಷಾದಿಸಿದರು.
ಕಾಯಕಯೋಗಿ ಸಿದ್ದರಾಮನಿಗೆ ಆಶ್ರಯ, ಹಣಕಾಸಿನ ನೆರವು ನೀಡಿದವಳು ರಾಣಿ ಚಾಮಲಾದೇವಿ. ಆಕೆಯ ಹೆಸರೇ ನಮಗೆ ತಿಳಿದಿಲ್ಲ. ಶೌರ್ಯ, ಸಾಹಸ, ಸ್ವಾಮಿನಿಷ್ಠೆಗೆ ಹೆಸರಾದ ಸಂಗೊಳ್ಳಿ ರಾಯಣ್ಣನ ರಾಜಮಾತೆ ಕಿತ್ತೂರು ಚೆನ್ನಮ್ಮ ಅಜ್ಞಾತ ವಾಸದಲ್ಲಿದ್ದಾಳೆ. ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದುವರೆಯುತ್ತಿದ್ದು ಸಮಾನತೆಯನ್ನು ಬೇಡದೆ ಹಕ್ಕಿನಿಂದ ಪಡೆಯುವತ್ತ ದಾಪುಗಾಲಿಡುತ್ತಿದ್ದಾಳೆ. ಆದರೆ ಸ್ವಾತಂತ್ರದ ಹೆಸರಿನಲ್ಲಿ ಸ್ವೇಚ್ಛಾಚಾರವಾದರೆ ಸಂಸ್ಕೃತಿ, ಸಾಮಾಜಿಕ ಬದುಕು ನಾಶವಾಗದಂತೆ ಕಾಪಾಡುವ ಹೆಚ್ಚಿನ ಜವಾಬ್ದಾರಿ ಹೆಣ್ಣಿನ ಮೇಲಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಲೀಲಾ ಸಂಪಿಗೆ ಮಾತನಾಡಿ, ಸ್ತ್ರೀಯರ ನ್ನು ಹೊಗಳುತ್ತಲೇ ಗರ್ಭ ಗುಡಿಯಲ್ಲಿಡುವ ಹುನ್ನಾರ ಹಿಂದಿನಿಂದಲೂ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಮಾಧುಸ್ವಾಮಿಯವರು ವಿಚಾರವಂತ ರಾಜಕಾರಣಿ ಯಾಗಿದ್ದು, ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಶೇಕಡಾ 50 ರಷ್ಟು ಮೀಸಲಾತಿ ಕಲ್ಪಿಸುವುದರ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸುವ ಕ್ರಾಂತಿಕಾರಿ ಹೆಜ್ಜೆ ಇಡಬೇಕೆಂದರು. ಇದಕ್ಕೆ ಉತ್ತರಿಸಿದ ಮಾಧುಸ್ವಾಮಿಯವರು 51%ರಷ್ಟಿರುವ ಮಹಿಳೆಯರು ಒಟ್ಟಾದರೆ ನಮಗೇ ಉಳಿಗಾಲವಿಲ್ಲ. ಮೀಸಲಾತಿ ಕೇಳುವುದರ ಬದಲು ಒಗ್ಗಟ್ಟಾಗಿ ಎಂದರಲ್ಲದೇ ಗುಡ್ಡಗಾಡು ಪ್ರದೇಶದ ಸಂತಾಲ ಬುಡಕಟ್ಟಿನ ದ್ರೌಪದಿ ಮುರ್ಮು ರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಅಯ್ಕೆ ಮಾಡಿದ ಹೆಮ್ಮೆ ನಮಗಿದೆ ಎಂದರು.
ಲೀಲಾ ಸಂಪಿಗೆಯವರು ಇಂದಿನ ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬಾರದಂತಹ ಪರಿಸ್ಥಿತಿ ಇದ್ದು ಮೀಸಲಾತಿ ಅಗತ್ಯವಿದೆ ಎಂದೇ ಪ್ರತಿಪಾದಿಸಿದರು. ಮಾತು ಪ್ರತಿಮಾತು, ಚರ್ಚೆ, ಸಂವಾದಗಳಿಂದ ಸಮಾರೋಪ ಸಮಾರಂಭ ಚೇತೋಹಾರಿಯಾಗಿತ್ತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯವರಾದ ವಿದ್ಯಾಕುಮಾರಿ ಯವರು ಮಹಿಳಾ ಪ್ರಗತಿ ಮತ್ತು ಸಾಧನೆಗಳ ಹಿನ್ನೆಲೆಯಲ್ಲಿ ಬಹುಮುಖ ಹೊಣೆಗಾರಿಕೆ ಯನ್ನು ನೆನಪಿಸಿದರು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಇಪ್ಪತ್ತೊಂದು ಮಹಿಳೆಯರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy